ಪ್ರತ್ಯಕ್ಷಾನುಭವ
	ಜೀವಿಗೂ ಜಗತ್ತಿನೊಡನೆ ಇರುವ ಸಂಬಂಧದ ಒಂದು ಪ್ರಕಾರ (ಪರ್ಸೆಪ್ ಷನ್) ಜೀವಿ ಜಗತ್ತನ್ನು ಅರಿಯುವ ಮುಖ್ಯ ಸಾಧನಗಳಲ್ಲಿ ಇದು ಒಂದು. ವರ್ತನೆಗೆ ಪೂರ್ವಭಾವಿಯಾಗಿ ಈ ಅರಿವು ಅಗತ್ಯವಾಗುತ್ತದೆ. ಇಂದ್ರಿಯಗಳ ಮೇಲೆ ಬಾಹ್ಯವಸ್ತುವೂ ಅದರ ಸುತ್ತಮುತ್ತ ಇರುವ ವಿವರಗಳೂ ಮಾಡುವ ಪರಿಣಾಮದ ಆಧಾರದ ಮೇಲೆ ಮೈದಳದ ಅರಿವು ವಸ್ತುವಿನ ಸ್ವಭಾವ ನಿರ್ದೇಶನ, ದೇಶಕಾಲಪರಿಜ್ಞಾನ, ತಾತ್ಪರ್ಯ ನಿಶ್ಚಯ ಮತ್ತು ಪ್ರತ್ಯಭಿಜ್ಞೆ ಇವುಗಳಿಂದ ಒಡಗೂಡಿದ್ದಾಗ ಪ್ರತ್ಯಕ್ಷವೆನಿಸಿಕೊಳ್ಳುತ್ತದೆ. ವಸ್ತುಗಳು ಅವು ಕಾಣುವ ಹಾಗೆ ಕಾಣುವುದು ಏತಕ್ಕೆ, ಹೇಗೆ? ಈ ಸಮಸ್ಯೆಯೇ ಪ್ರತ್ಯಕ್ಷಾನುಭವದ ಸಾರಸರ್ವಸ್ವವೆಂದು ಕರ್ಟ್ ಕಾಫ್ಕಾ ಎಂಬ ಮನಶ್ಶಾಸ್ತ್ರಜ್ಞ ನಿರೂಪಿಸಿದ್ದಾನೆ. ಇಂದ್ರಿಯ ಮತ್ತು ಅರ್ಥ ಎರಡರ ಸಂನಿಕರ್ಷದಿಂದ ಉಂಟಾದ ಜ್ಞಾನವೇ ಪ್ರತ್ಯಕ್ಷವೆಂದು ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರ ಪರಿಣತರು ನಿರೂಪಿಸಿದರಷ್ಟೆ (ಇಂದ್ರಿಯಾರ್ಥ ಸಂನಿಕರ್ಷಜನ್ಯಜ್ಞಾನಂ ಪ್ರತ್ಯಕ್ಷಂ). ಇದರಲ್ಲಿ ಸತ್ಯವುಂಟು. ಬಾಹ್ಯಪದಾರ್ಥವಿಲ್ಲದ ಜ್ಞಾನವಾದರೆ ಅದು ಭ್ರಾಂತಿ, ಮನಕಲ್ಪನೆ. ಇಂದ್ರಿಯ ವ್ಯಾಪಾರವಿದ್ದರೂ ಬಾಹ್ಯಪದಾರ್ಥಗಳನ್ನೂ ಅಯಥಾಭೂತವಾಗಿ ಗ್ರಹಿಸಿದರೆ ಅದು ವಿಪರೀತಜ್ಞಾನ, ಇಂದ್ರಿಯವೃತ್ತಿಗೆ ಪಾತ್ರವಾದ ವಿಷಯ ಜ್ಞಾನಕ್ಕೆ ಸಮರ್ಪಕವಾದ ಆಕರವಾದರೆ ಮಾತ್ರ ಪ್ರತ್ಯಕ್ಷ ಎನ್ನುತ್ತಾರೆ. ಎಂದ ಮೇಲೆ ಪ್ರತ್ಯಕ್ಷ ವ್ಯವಹಾರದಲ್ಲಿ ಸಂವೇದನೆಯೇ ಮುಖ್ಯ. ಆದರೆ ಸಂವೇದನೆಯಷ್ಟೇ ಇದ್ದರೆ ಅದು ಪ್ರತ್ಯಕ್ಷವಾಗದು. ಸಂವೇದನೆಯೊಂದಿಗೆ ಅರ್ಥವೂ ಅಥವಾ ತಾತ್ಪರ್ಯ ನಿಶ್ಚಯವೂ ಸೇರಿದರೇನೇ ಪ್ರತ್ಯಕ್ಷವಾಗುವುದು. ತತ್ತ್ವಶಾಸ್ತ್ರ ರೀತ್ಯ ಪ್ರತ್ಯಕ್ಷದ ವಿವರಗಳನ್ನರಿಯಲು  (ನೋಡಿ- ಪ್ರತ್ಯಕ್ಷ).
	ಇಂದ್ರಿಯ ಸಂವೇದನೆಯನ್ನು ಮನಸ್ಸಿನ ಪ್ರಕಾರಗಳಿಂದ ಅರಿತು ಅರ್ಥ ನಿಷ್ಪತ್ತಿ ಮಾಡುವುದು ಪ್ರತ್ಯಕ್ಷದ ಮುಖ್ಯಕ್ರಿಯೆ. ಇಂದ್ರಿಯ ಸಂವೇದನೆಗೆ ಅದ್ಯತನ ಕಾಲದಲ್ಲಿ ಏಕದೇಶದಲ್ಲಿ ವಸ್ತುವೊಂದು ಇರಬೇಕು. ಅದು ಇಂದ್ರಿಯ ಗ್ರಾಹ್ಯವಾಗಬೇಕು. ಪದಾರ್ಥ ಅದ್ಯತನ ಕಾಲದಲ್ಲಿ ಭೂತಕಾಲದಲ್ಲಿ ಇದ್ದರೆ ಅದು ಸ್ಮøತಿ. ಭವಿಷ್ಯತ್‍ಕಾಲದಲ್ಲಿ ಇರುವುದಾದರೆ ಅದು ನಿರೀಕ್ಷೆ. ಕಲ್ಪನೆ ಏಕದೇಶೀಯವಾಗಿ ಇಲ್ಲದೆ ಇದ್ದರೆ ಅದು ಊಹೆ ಅಥವಾ ಕಲ್ಪನೆ. ತತ್ಕಾಲದಲ್ಲಿ ವಿಷಯಾಭಿಮುಖವಾದ ಇಂದ್ರಿಯ ವ್ಯಾಪಾರ ಇರುವುದು ಪ್ರತ್ಯಕ್ಷದ ಮುಖ್ಯ ಲಕ್ಷಣ. ವಸ್ತು ಎದುರಿಗೆ ಇದ್ದರೂ ಪ್ರತ್ಯಕ್ಷ ಆಗಿಯೇ ತೀರುವುದೆಂಬ ನಿಯಮವಿಲ್ಲ. ಹಲವಾರು ವೇಳೆ ಮುಂದೆ ಇದ್ದವರನ್ನೂ ನಾವು ನೋಡುವುದೇ ಇಲ್ಲ. ನಮ್ಮ ಕೋಣೆಯಲ್ಲಿ ಯಾವಾಗಲೂ ಇರುವ ಸಾಮಾನುಗಳನ್ನು ಗಮನಿಸುವುದೇ ಇಲ್ಲ. ಹೊಸದೊಂದು ಸಾಮಾನು ಬಂದರೆ ಅಥವಾ ಇದ್ದ ಸಾಮಾನು ಒಂದು ಇಲ್ಲವಾದರೆ ಅದು ತಟ್ಟನೆ ಗಮನಕ್ಕೆ ಬರುತ್ತದೆ. ಕೋಣೆಯಲ್ಲಿರುವ ಉಷ್ಣಾಂಶ ಸಮವಾಗಿದ್ದರೆ ನಾವು ಅದನ್ನು ಗಮನಿಸುವುದಿಲ್ಲ; ಅದರಲಿ ಏರಿಳಿತವಾದರೆ, ಸೆಕೆ ಅಥವಾ ಚಳಿ ಅನುಭವಕ್ಕೆ ಬರುವುದು. ಹೀಗೆ ಇಂದ್ರಿಯಕ್ಕೆ ವಿಷಯವಾದ ಪದಾರ್ಥವನ್ನೂ ಗಮನಿಸದೇ ಇರುವುದು ಅಪ್ರತ್ಯಕ್ಷ ಎನಿಸಿಕೊಳ್ಳುತ್ತದೆ. ಇಂದ್ರಿಯ ಸಂವೇದನೆ ಆದೊಡನೆ ಮನಸ್ಸಿನ ವ್ಯವಧಾನಕ್ಕೆ ಅದು ಬಂದರೆ ಆಗ ಪ್ರತ್ಯಕ್ಷದ ಅಂಕುರಾರ್ಪಣವಾಗುತ್ತದೆ. ಆಗ ಇಂದ್ರಿಯ ವ್ಯಾಪಾರ ಸಫಲವಾಗುತ್ತದೆ. ಆದ್ದರಿಂದ ವ್ಯವಧಾನ ಅಥವಾ ಅವಧಾನ ಪ್ರತ್ಯಕ್ಷಕ್ಕೆ ಅನಿವಾರ್ಯ.
	ಇಂದ್ರಿಯಸಂವೇದನೆ ಮತ್ತು ಅವಧಾನ ಎರಡೂ ಇದ್ದರೂ ಪ್ರತ್ಯಕ್ಷ ಸಿದ್ಧಿಸದಿರಬಹುದು. ಅರ್ಥಗ್ರಹಣ ಅಥವಾ ತಾತ್ಪರ್ಯ ನಿಶ್ಚಯ ಸಿದ್ಧಿಗೆ ಅತ್ಯವಶ್ಯ. ಇದು ಹಿಂದೆ ಒದಗಿದ ಅನುಭವಗಳು ಸ್ಮøತಿಪಥದಲ್ಲಿ ಇದ್ದುಕೊಂಡು ಯಾವುದಾದರೊಂದು ವಿಷಯ ವ್ಯಕ್ತವಾದಾಗ ಉದ್ಭೂತವಾಗುವ ಸೌಲಭ್ಯದಿಂದ ಉಂಟಾಗುತ್ತದೆ. ನೋಡುವಾಗಲೇ ತಾತ್ಪರ್ಯ ನಿಶ್ಚಯವೂ ಆಗುವುದರಿಂದ ಇದನ್ನು ಅನುಕ್ರಮ ಎನ್ನುವ ಹಾಗಿಲ್ಲ. ಎರಡೂ ಏಕಕಾಲದಲ್ಲಿ ನಡೆಯುವ ವ್ಯಾಪಾರಗಳು. ಇದನ್ನು ಜರ್ಮನ್ ಮನಶ್ಯಾಸ್ತ್ರಜ್ಞರು ವ್ಯವಸ್ಥೆ ಎಂದು ನಿರ್ದೇಶಿಸಿ ಇದರಲ್ಲಿ ವರ್ತಮಾನ ವ್ಯಾಪಾರ ಪೂರ್ವಾಂಗ ಮತ್ತು ಪೂರ್ವಾನುಭವದ ಪುನರುತ್ಥಾನ ಉತ್ತರಾಂಗ ಎಂದು ವಿವರಿಸಿದ್ದಾರೆ. ಈ ಎರಡು ಅಂಗಗಳೂ ವ್ಯವಸ್ಥೆಯ ನಿದರ್ಶನಗಳೇ, ನೋಡುವಾಗ, ಎಂದರೆ ಇಂದ್ರಿಯ ಸಂವೇದನೆಯಲ್ಲಿ, ಸಾವಿರಾರು ದೃಶ್ಯ ವಿವರಗಳು ಅವಿರತ ತರಂಗಗಳಲ್ಲಿ ಕಣ್ಣನ್ನು ಮುಟ್ಟಿ ಅಲ್ಲಿ ಭೌತಿಕ ಪ್ರವೃತ್ತಿಗಳಿಂದಾಗಿ ಒಟ್ಟು ಗೂಡಿ ಸಮಷ್ಟಿಯ ರೂಪವನ್ನು ತಳೆಯುವುವು. ನೇತ್ರಪಟಲದ ಮೇಲೆ ಪ್ರತಿಬಿಂಬಿತವಾಗುವ ಚಿತ್ರದಲ್ಲಿ ಈ ವ್ಯವಸ್ಥೆ ಇರುತ್ತದೆ. ಈ ವ್ಯವಸ್ಥೆ ಇಲ್ಲದೆ ಕಣ್ಣ ಬಾಹ್ಯವಸ್ತುವಿನ ಚಿತ್ರದಲ್ಲಿ ಸಂಪಾದಿಸುವುದು ಸಾಧ್ಯವೇ ಇಲ್ಲ. ಇದಕ್ಕೆ ಇಂದ್ರಿಯ ವ್ಯವಸ್ಥೆ ಎನ್ನುತ್ತಾರೆ. ಇದು ಪ್ರತ್ಯಕ್ಷಕ್ಕೆ ಪೂರ್ವಭಾವಿಯಾದ ವ್ಯವಸ್ಥೆ. ಇದಾದ ಅನಂತರ ಸಮಷ್ಟಿ ಅಥವಾ ವ್ಯವಸ್ಥಿತ ಚಿತ್ರ ಮಿದುಳಿಗೆ ಬಂದು ಅಲ್ಲಿ ಪೂರ್ವಾನುಭವದ ಸ್ಮøತಿಗಳೊಂದಿಗೆ ಬೆರೆತು ಹೊಸ ಅನುಭವವಾಗಿ ಕಾಣಿಸಿಕೊಳ್ಳುತ್ತದೆ. ಇದು ಮಾನಸಿಕ ವ್ಯವಸ್ಥೆ ಎನಿಸಿಕೊಳ್ಳುತ್ತದೆ.
	ವಿವಿಕ್ತವಾದ ವಿಭಿನ್ನವಾದ ಇಂದ್ರಿಯ ವೃತ್ತಿಗಳನ್ನು ಸಮಷ್ಟಿಕ್ರಿಯೆಯಲ್ಲಿ ವ್ಯವಸ್ಥೆಮಾಡುವುದೇ ಆಶ್ಚರ್ಯದ ಪ್ರಸಂಗ. ಅದಕ್ಕಿಂತ ಹೆಚ್ಚು ಅದ್ಭುತವಾದ ಪ್ರಸಂಗವೆಂದರೆ ಮಾನಸಿಕ ವ್ಯವಸ್ಥೆ. ಇಂದ್ರಿಯಜನ್ಯ ಸಂವೇದನೆಯ ಫಲವಾಗಿ ಪದಾರ್ಥದ ಬಗ್ಗೆ ನೂರಾರು ಸಾವಿರಾರು, ಅಸಂಖ್ಯಾತ ವಾಸನೆಗಳು ಹುಟ್ಟಿಕೊಳ್ಳುತ್ತವೆ. ಇವೆಲ್ಲ ತಾತ್ಕಾಲಿಕವಾದವು. ತೋರಿ ಅಡಗುವ ಸ್ವಭಾವದವು ಕ್ಷಣಭಂಗುರ. ಇಂಥ ವಾಸನಾವೃತ್ತಿಗಳನ್ನೆಲ್ಲ ಒಂದುಗೂಡಿಸಿ ವ್ಯವಸ್ಥೆಮಾಡಿ ಎಲ್ಲಕ್ಕೂ ಸಮಾನವಾದ ಅರ್ಥವನ್ನು ಬೇರ್ಪಡಿಸಿ ಒಂದೇ ಭಾವನೆಯನ್ನು ಪ್ರತ್ಯಕ್ಷದಂತೆ ನಿಲ್ಲಿಸುವುದು ಅದ್ಭುತವ್ಯಾಪರವೇ.
	ದೈಹಿಕ ರಚನೆಯನ್ನು ಆಳವಾಗಿ ಅಧ್ಯಯನಮಾಡಿದ ಹೆಲ್ಮ್ ಹೋಲ್ಟ್ಸ್ ಮತ್ತು ಹೆರಿಂಗ್ ಇಬ್ಬರೂ ಪ್ರತ್ಯಕ್ಷಕ್ಕೆ ಪೂರ್ವದಲ್ಲಿ ಸಂವೇದನೆಗಳು ಇದ್ದೇ ಇರುವುವೆಂದು ನಂಬಿದ್ದರು. ಈ ಸಂವೇದನೆಗಳು ಅಸ್ಪಷ್ಟವಾಗಿಯೂ ದುಷ್ಟವಾಗಿಯೂ ಇದ್ದು ಪ್ರತ್ಯಕ್ಷ ವ್ಯಾಪಾರದಿಂದ ಇವು ಸ್ಪಷ್ಟವಾಗುವುವು, ನಿರ್ದುಷ್ಟವಾಗುವುವು ಎಂದು ಇವರ ವಾದ. ಎಂದರೆ ಪ್ರತ್ಯಕ್ಷದಲ್ಲಿ ಕಾಣ ಬರುವ ಏಕತಾನತೆ ಹೀಗೆ ಸಂವೇದನೆಯನ್ನು ಶುದ್ಧಮಾಡುವುದರಿಂದ ಒದಗುತ್ತದೆ ಎಂಬ ಸಿದ್ಧಾಂತ ಇವರ ಕಾಲದಲ್ಲಿ ನೆಲೆಯೂರಿತು. ಶುದ್ದೀಕರಣ ಹೇಗೆ ಆಗುತ್ತದೆ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಹೆಲ್ಮ್‍ಹೋಲ್ಟ್ಸ್ ಇದು ಮನುಷ್ಯನಿಗೆ ವಿಶಿಷ್ಟವಾದ ಬುದ್ಧಿ ಶಕ್ತಿಯಿಂದ ಎಂದೂ ಹೆರಿಂಗ್ ದೈಹಿಕ ರಚನೆಯಲ್ಲಿ ಮೂಲಭೂತವಾದ ನರಗಳ ಕ್ರಿಯೆಗಳಿಂದ ಎಂದೂ ವಿವರಿಸಿದರು. ಆದರೆ ಬಿರ್ಲಿನ್ ಪಂಥದ ಮನಶ್ಶಾಸ್ತ್ರಜ್ಞರು ಪ್ರತ್ಯಕ್ಷಕ್ಕೆ ಮುಂಚೆ ಸಂವೇದನೆಗಳು ಇರುವುದು ಸಾಧ್ಯವಿಲ್ಲವೆಂದೂ ಪ್ರತ್ಯಕ್ಷವನ್ನು ಆಧರಿಸಿಯೇ ಸಂವೇದನೆಗಳು ಮೈದಳೆಯುವುವೆಂದೂ ನಿರ್ಣಯಿಸಿದರು. ಪ್ರತ್ಯಕ್ಷಕ್ಕೆ ಸಂವೇದನೆಗಳು ರಚಿಸುವ ವಸ್ತುಗಳು ಅಲ್ಲ. ಪ್ರತ್ಯಕ್ಷದಿಂದಲೇ ಅವು ರಚಿಸಲ್ಪಟ್ಟವು ಎಂದು ಇವರ ವಾದ. ಹಲವಾರು ವಿವರಗಳು ವ್ಯವಸ್ಥೆಗೊಂಡು ಸಮಷ್ಟಿಯಾಗುವುದೆಂದು ಇವರು ಒಪ್ಪಲಿಲ್ಲ. ಈ ಸಮಷ್ಟಿ ಮೂಲಭೂತವಾದ. ಅರಿವಿಲ್ಲದೆ ನಡೆಯುವ ಕ್ರಿಯೆ. ಅದ ಭೌತಿಕವೂ ಹೌದು. ಮಾನಸಿಕವೂ ಹೌದು. ಈ ಪದ್ಧತಿಯ ಚಿಂತನೆಯಿಂದಲೇ ಸಮಷ್ಟಿ ಸಂಪ್ರದಾಯ ಬೆಳೆದು ಬಂತು. ಈ ಸಂಪ್ರದಾಯದವರು ಪ್ರತ್ಯಕ್ಷಾನುಭವವನ್ನು ಕುರಿತು ಗಾಢವಾದ ಜಿಜ್ಞಾಸೆಗಳನ್ನು ನಡೆಸಿದ್ದಾರೆ. ಸಿದ್ಧಾಂತಗಳನ್ನು ನಿರೂಪಿಸಿದ್ದಾರೆ.
ಅಂತೂ ಪ್ರತ್ಯಕ್ಷವೆಂಬುದು ಹೊರಗಣ ಪದಾರ್ಥದ ಸ್ವರೂಪವನ್ನು ಅವಲಂಬಿಸಿ ಮನುಷ್ಯನ ಒಳಗೆ ನಡೆಯುವ ವ್ಯಾಪಾರವಿಶೇಷ. ಈ ಪದಾರ್ಥ ಯಾವ ಇಂದ್ರಿಯವನ್ನು ಹೇಗೆ. ಇಷ್ಟು ಪ್ರಮಾಣದಲ್ಲಿ ಉತ್ತೇಜಿತವನ್ನಾಗಿ ಮಾಡುತ್ತದೆ ಎಂಬುದೂ ಪ್ರತ್ಯಕ್ಷವನ್ನು ನಿರ್ಧರಿಸುವ ವಿವರ ಎಂಬುದೂ ಈಚಿನ ಸಂಶೋಧನೆಗಳಿಂದ ಸ್ಪಷ್ಟವಾಗುತ್ತದೆ. ಪ್ರತ್ಯಕ್ಷಕ್ಕೆ ಪೂರ್ವದಲ್ಲಿ ಇಂದ್ರಿಯಕ್ಕೂ ವಸ್ತುವಿಗೂ ಆದಿಮ, ಮೂಲಭೂತ ಸಂಬಂಧ ಏರ್ಪಡುವ ಕ್ರಿಯೆ ವಿಶಿಷ್ಟವಾದುದೆಂದೂ ಆತ್ಮಾವಲೋಕನದಿಂದ ಸುಮಾರಾಗಿ ಸ್ಪಷ್ಟವಾಗುವುದು ಸಾಧ್ಯವೆಂದೂ ಕೆಲವು ಅಧ್ಯಯನಗಳು ಸೂಚಿಸಿವೆ. ಈ ಮೂಲಭೂತ ಪ್ರಕ್ರಿಯೆಗಳು ಅವಧಾನದಿಂದ ನಿಲ್ಲುತ್ತವೆ, ನಿಂತು ಪ್ರತ್ಯಕ್ಷವಾಗಿ ಅರಳುತ್ತವೆ. ಸಂವೇದನೆಯು ಪ್ರತ್ಯಕ್ಷ ಸಮರ್ಥ ಆಗಬೇಕಾದರೆ ಸಿದ್ಧವಾದ ಒಂದು ಉತ್ತೇಜನದ ನೆಲೆಯಿಂದ ಕದಲಿ ಮತ್ತೊಂದು ನೆಲೆಗೆ ಹರಿಯಬೇಕು. ಆಗಲೇ ಪದಾರ್ಥ ಚಿತ್ತಭಿತ್ತಿಯಲ್ಲಿ ಮೂಡುವುದು. ಇದಕ್ಕೆ ಸಂದರ್ಭಶುದ್ಧಿಯ ಅಗತ್ಯವಿದೆ. ಯಾವ ಸಂದರ್ಭದಲ್ಲಿರುವ ಅಗತ್ಯ ಯಾವ ಬಗೆಯಿಂದ ಪ್ರಾಣಿಯನ್ನು ನಿರೀಕ್ಷಿಸುವಂತೆ, ಕಾರ್ಯೋನ್ಮುಖವಾಗುವಂತೆ ಮಾಡುತ್ತದೆ ಎನ್ನುವುದು ಇಲ್ಲಿ ಪ್ರಮುಖವಾದ ವಿವರ. ಸಂದರ್ಭದ ಒತ್ತಡದಿಂದ ಮನುಷ್ಯನಲ್ಲಿ ಅವಧಾನ ಅಗತ್ಯವಾಗುತ್ತದೆ. ಅವಧಾನವಿದ್ದಾಗ ದೃಷ್ಟಿ ಯಥಾಕಾಂಕ್ಷೆಯಿಂದ ಆಯಾ ವಸ್ತುವಿನಲ್ಲಿ, ಆಯಾ ಸನ್ನಿವೇಶದಲ್ಲಿ ನಿಲ್ಲುತ್ತದೆ. ಉಳಿದೆಲ್ಲ ವಿವರಗಳನ್ನು ಬಿಟ್ಟು ದೃಷ್ಟಿಯನ್ನೆಲ್ಲ ಈ ಪರ್ಯಾಪ್ತಕ್ಷೇತ್ರದಲ್ಲಿಯೇ ಧಾರಣ ಮಾಡುವುದರಿಂದ ಪ್ರಾಣಿ ಪ್ರತ್ಯಕ್ಷಾನುಭವಕ್ಕೆ ಸಿದ್ಧನಾಗುತ್ತಾನೆ. ಇದಕ್ಕೆ ಇಂಗ್ಲಿಷಿನಲ್ಲಿ (ಪ್ರೈಮಿಂಗ್) ಸಿದ್ಧತೆ ಎನ್ನುತ್ತಾರೆ. ಪ್ರತ್ಯಕ್ಷ ಹೀಗೆ ಸಿದ್ಧನಾದ ಪ್ರಾಣಿಯ (ಪ್ರೈಮ್ಡ ಆಗ್ರ್ಯಾನಿಸಂ) ಪ್ರವೃತ್ತಿ ಇಂದು ನಿರ್ದೇಶಿಸುತ್ತಾರೆ.
ಇದನ್ನೇ ಆಂತರಿಕ ಅಗತ್ಯ, ಒತ್ತಡ, ಸನ್ನದ್ಧನಾಗುವ ವ್ಯವಸ್ಥಾನ ಎಂದು ಮುಂತಾಗಿ ನಿರ್ದೇಶಿಸುವುದುಂಟು. ತಾಯಿಯ ಸುತ್ತ ನೂರಾರು ಶಬ್ದಗಳಿದ್ದರೂ ತನ್ನ ಮಗು ಅಳುವ ಸಣ್ಣದನಿ ತಟ್ಟನೆ ಆಕೆಗೆ ಕೇಳುವುದಷ್ಟೆ. ವಾಹನವನ್ನು ಚಾಲನ ಮಾಡುತ್ತಿರುವಾತ ವಾಹನ ಸಂಕೇತಗಳನ್ನು ಎಷ್ಟೇ ಗಲಾಟೆಯಿದ್ದರೂ ಗಮನಿಸುತ್ತಾನಷ್ಟೆ. ಇಂಥ ನಿದರ್ಶನಗಳು ಸನ್ನದ್ಧನಾದ ಚಿತ್ತಭಿತ್ತಿಯನ್ನು ತೋರಿಸುತ್ತದೆ. ಕೆಲವು ವಿವರಗಳು ಕೆಲವರನ್ನು ಹಿಡಿದಿರುತ್ತವೆ. ಇದಕ್ಕೆ ಒಳಗಿನ ಅಗತ್ಯ (ಮೋಟಿವೇಷನ್) ಕಾರಣ. ಸನ್ನಿವೇಶವೊಂದಕ್ಕೆ ಹೊಂದಿಕೊಂಡು ನಡೆಯುವ ಕಾತುರ ಹೀಗೆ ವ್ಯಕ್ತಿಯನ್ನು ಸನ್ನದ್ಧನಾಗಿಸುತ್ತದೆ. ಈ ಸಿದ್ಧತೆ ಒಮ್ಮೆ ಮೂಡಿತೆಂದರೆ ಮುಂದಿನ ಕ್ರಿಯೆಗಳು ತಾವಾಗಿ ಜರುಗುತ್ತವೆ.
	ಸನ್ನಿವೇಶದಲ್ಲಿ ವಸ್ತುವಿನ ವಿವರಗಳು ಈ ಸಿದ್ಧತೆಯೊಂದಿಗೆ ಸೇರಿದಾಗ ಪ್ರತ್ಯಕ್ಷ ಕಾಣಸಿಕೊಳ್ಳುತ್ತದೆ. ಸಿದ್ಧತೆಯ ನೆಲೆಯಲ್ಲಿ ವಸ್ತುವಿನ ವಿವರಗಳು ಸೇರುವುದೇ ಅವಧಾನ ಎನಿಸಿಕೊಳ್ಳುತ್ತದೆ. ವಸ್ತುವಿನ ರೂಪ, ಪ್ರಮಾಣ, ದೂರ, ಹಿನ್ನೆಲೆ ಮುಂತಾದ ಭೌತಿಕ ವಿವರಗಳೂ ವ್ಯಕ್ತಿಯ ಮನಸ್ಸಿನಲ್ಲಿ ಆ ವಸ್ತುವಿನ ವಿಚಾರವಾಗಿ ಇರುವ ಪೂರ್ವ ಪರಿಚಯ ಮನೋವೃತ್ತಿ, ನಿರ್ಣಯ ಮುಂತಾದ ಮಾನಸಿಕ ವಿವರಗಳೂ ದೈಹಿಕವಾದ ಆರೋಗ್ಯ, ಆಯಾಸ, ಕ್ಷುದ್ಬಾಧೆ ತ್ರಾಸ ಮುಂತಾದ ವಿವರಗಳೂ ಅವಧಾನವನ್ನು ನಿರ್ಧರಿಸುತ್ತವೆ. ಸಂವೇದನೆಯಂತೆ ಅವಧಾನವೂ ಅನವರತ ನಡೆಯುವ ಕ್ರಿಯೆಗಳ ಸಕ್ರಮವ್ಯಾಪಾರ. ವಸ್ತುವಿನ ಗುಣದಿಂದಲೂ ವ್ಯಕ್ತಿಯ ಅಗತ್ಯದಿಂದಲೂ ಇದು ಹೆಚ್ಚು ಅಥವಾ ಕಡಿಮೆ ಕಾಲ ನಿಲ್ಲಬಲ್ಲದು.
	ತದೇಕಧ್ಯಾನದಿಂದ ವಸ್ತುಗಳನ್ನು ನೋಡುವಾಗ ಹಲವಾರು ವಿವರಗಳು ಪ್ರಾದರ್ಭೂತವಾಗುತ್ತದೆ. ಅವಧಾನದ ಸಂತಾನಕ್ರಿಯೆಗಳು ಒಂದೇ ವಸ್ತುವಿನಲ್ಲಿ ನಿಮಗ್ನವಾದಾಗ ಅದು ಧ್ಯಾನ ಅಥವಾ ಸಮಾಧಿ ಎನಿಸಿಕೊಳ್ಳುತ್ತದೆ. ಇದು ಕಲ್ಪನೆಯಿಂದ ವಿಭಿನ್ನವಾದ ವ್ಯಾಪಾರ. ಪ್ರತ್ಯಕ್ಷಾನುಭವದ ಅಧ್ಯಯನದಲ್ಲಿ ವಸ್ತು ಎಂದರೇನು ಎಂಬುದರ ವಿಚಾರವಾದ ಚರ್ಚೆ ಬರುತ್ತದೆ. ಬಾಹ್ಯಜಗತ್ತಿನ ವಿವರವಾಗಿ ವಸ್ತುವೊಂದಿದ್ದರೆ ಅದು ಪುರುಷ ತಂತ್ರವಲ್ಲ; ನೋಡುವವನ ಅಧೀನವಲ್ಲ. ನೋಡುವಾತ ಇರದಿದ್ದರೂ ವಸ್ತುವಿನ ಆಸ್ತಿತ್ವಕ್ಕೆ ಊನ ಬರುವುದಿಲ್ಲ. ಹಲವಾರು ಮಂದಿ ನೋಡಿದರೆ ಎಲ್ಲರಿಗೂ ಸಮಾನವಾಗಿ ಕಾಣಿಸುವ ಗುಣವಿದ್ದರೇ ಅದು ಬಾಹ್ಯಾವಿವರ. ಎಂದರೆ ನೋಡುವವನ ಬುದ್ಧಿಯಿಂದ ಅಷ್ಟಾಗಿ ಪ್ರಭಾವಿತವಾಗದ ವಿವರಗಳು ಇಲ್ಲಿ ಇರುತ್ತವೆ. ದರ್ಶನಕ್ರಿಯೆಯೆಲ್ಲಿ ದ್ರಷ್ಟಾರನ ಇಂದ್ರಿಯಗಳಿಂದಾಗಲೀ ಬುದ್ಧಿಯಿಂದಾಗಲೀ ನಿರ್ದಿಷ್ಟವಾಗದ ವಸ್ತುವಿವರಗಳು ಇದ್ದರೇನೇ ಅದು ಪ್ರತ್ಯಕ್ಷ ದರ್ಶನ. ಇಂಗ್ಲಿಷಿನಲ್ಲಿ ಇದನ್ನು ಮಿನಿಮಮ್ ಆಫ್ ಅಬ್ಸರ್ವರ್-ಇನ್‍ವಾಲ್ವ್‍ಮೆಂಟ್ ಎನ್ನುತ್ತಾರೆ. ಸಂಪೂರ್ಣವಾಗಿ ದ್ರಷ್ಟಾರನ ಪಾತ್ರಶೂನ್ಯವಾಗಿರುವುದು ಸಾಧ್ಯವಿಲ್ಲ. ಹಾಗಿದ್ದರೆ ಅದು ಕೇವಲ ಸಂವೇದನೆ ಆಯಿತು. ಪೂರ್ವಾನುಭವಗಳ ಸ್ಮøತಿ, ಅರ್ಥನಿಷ್ಪತ್ತಿ ಮುಂತಾದ ಕ್ರಿಯೆಗಳು ದ್ರಷ್ಟಾರಸನೇ ಅವಲಂಬಿಸಿರುತ್ತವೆ. ಆದರೆ ವೈಯಕ್ತಿಕ ಭಾವನೆಗಳು ಎಷ್ಟು ಕಮ್ಮಿ ಇದ್ದರೆ ಅಷ್ಟೂ ಪ್ರತ್ಯಕ್ಷ ನೈಜವಾಗಿರುತ್ತದೆ.
	ಬಾಹ್ಯವಸ್ತುವೆಂದರೆ ಅದನ್ನು ಸ್ಪರ್ಶಿಸುವ ಗ್ರಹಿಸುವ ಸೌಲಭ್ಯ ಇರಬೇಕು. ಈ ಗುಣವನ್ನು ಎನ್‍ಕೌಂಟರಬಿಲಿಟಿ ಎನ್ನುತ್ತಾರೆ. ಎಂದರೆ ಮನುಷ್ಯ ಹೊರಗಣ ಪದಾರ್ಥವೊಂದರ ಕಡೆ ಬೊಟ್ಟುಮಾಡಿ ಅದು ಇಂಥದು ಎಂದು ನಿರ್ದೇಶಿಸುವುದು ಸಾಧ್ಯ. ಮನುಷ್ಯನನ್ನು ಮೀರಿ ಪದಾರ್ಥ ತನ್ನ ನೆಲೆಯಲ್ಲೇ ಬಾಹ್ಯಜಗತ್ತಿನ ವಿವರವಾಗಿ ಇದ್ದರೆ ಈ ನಿರ್ದೇಶನ ಸಾಧ್ಯವಾಗುವುದು. ಇದು ಪ್ರತ್ಯಕ್ಷದಲ್ಲಿ ಅಗತ್ಯವಾದ ವಿವರ. ನಾಲ್ಕಾರು ಜನ ಒಂದೇ ವಸ್ತುವನ್ನು ನೋಡಿದಾಗಲೂ ಪ್ರತ್ಯಕ್ಷದಲ್ಲಿ ವೈವಿಧ್ಯ ಇಲ್ಲದಿರುವುದು ಈ ಕಾರಣದಿಂದ. ಪ್ರತ್ಯಕ್ಷ ಬಹಿರಂಗಕ್ರಿಯೆ ಎನ್ನುತ್ತಾರೆ. ಈ ಎಲ್ಲ ಗುಣಗಳಿದ್ದು ಸ್ವತಂತ್ರವಾಗಿ ಬಾಹ್ಯಜಗತ್ತಿನ ಅಂಗವಾಗಿರುವ ವಸ್ತು ಪ್ರತ್ಯಕ್ಷದ ಪೂರ್ವರೂಪ. ಈ ವಸ್ತುವಿನಿಂದ ಆರಂಭವಾದ ಭೌತಿಕ ಪ್ರಸಾರಗಳು ಮನುಷ್ಯನ ಇಂದ್ರಿಯ ವಿವರಗಳ ಒಳ ಹೊಕ್ಕ ಸಂವೇದನೆಯಾಗಿ ಪರಿಣಮಿಸುತ್ತವೆ. ಈ ಸಂವೇದನೆಯ ಆಧಾರದ ಮೇಲೆ ಪ್ರತ್ಯಕ್ಷ ನಿಲ್ಲುತ್ತದೆ. ವಸ್ತು ಮರೆಯಾದರೆ ಅಥವಾ ಇಂದ್ರಿಯ ಸ್ಥಾನದಲ್ಲಿ ಅದರ ಭೌತಿಕ ಪ್ರಸರಗಳು ಮೂಡದೆ ಹೋದರೆ ಸಂವೇದನೆ ನಿಂತರೆ ಪ್ರತ್ಯಕ್ಷವೂ ಕೊನೆಗಾಣುತ್ತದೆ. ವಸ್ತುವಿಲ್ಲದೆ ಸಂವೇದನೆಯಿಲ್ಲ, ಸಂವೇದನೆಯಿಲ್ಲದೆ ಪ್ರತ್ಯಕ್ಷವಿಲ್ಲ.
ವಸ್ತುಗಳು ಜಗತ್ತಿನಲ್ಲಿ ಹೇಗೆ ಇವೆ ಎನ್ನುವುದು ಪ್ರತ್ಯಕ್ಷದಿಂದ ವೇದ್ಯವಾಗುತ್ತದೆ. ಇದು ಯಥಾರ್ಥವಾಗಿ. ಅಸಂದಿಗ್ಧವಾಗಿ ಸ್ಪಷ್ಟವಾಗುವುದು ಸಾಧ್ಯ ಎಂಬುದು ತತ್ತ್ವಶಾಸ್ತ್ರದಲ್ಲಿ ಜಿಜ್ಞಾಸೆಯಲ್ಲಿರುವ ವಿಚಾರ. ಮನಶ್ಯಾಸ್ತ್ರಜ್ಞರು ವಸ್ತುಗಳು ಹೇಗೆ ಇವೆ ಎನ್ನುವುದಕ್ಕಿಂತ ವಸ್ತುಗಳು ನಮಗೆ ಹೇಗೆ ಕಾಣುತ್ತವೆ ಎನ್ನುವುದು ಮುಖ್ಯವಾದ ಸಮಸ್ಯೆಯೆಂದು ಬಗೆದಿದ್ದಾರೆ. ವಸ್ತುಗಳನ್ನು ನೋಡುವುದು ಮಾತ್ರವಲ್ಲ, ಮನುಷ್ಯ ಈ ನೋಡುವಿಕೆಯೂ ವಸ್ತುವಿನ ವಿವರಗಳಲ್ಲಿ ಒಂದು. ವಸ್ತು ನಮಗೆ ಕಾಣುತ್ತಿರುವ ಬಗೆ ಹೇಗೆ ಎಂದು ನಾವು ವಿಚಾರಮಾಡತೊಡಗಿದರೆ ನಮ್ಮ ಗಮನ ವಸ್ತುವಿನ ಭೌತಿಕ ವಿವರಗಳಿಂದ ಈ ನೋಟದ ಕಡೆಗೆ ಹರಿಯುತ್ತದೆ. ವ್ಯಕ್ತಿಯ ಒಳಗೆ ನಡೆಯುವ ಅನುಭವದ ಅನ್ವೇಷಣೆ ಆರಂಭವಾಗುತ್ತದೆ. ಇಲ್ಲಿ ಪ್ರತ್ಯಕ್ಷ ಆದಿ ಭೌತಿಕವಷ್ಟೇ ಅಲ್ಲ, ಆಧ್ಯಾತ್ಮಿಕವಾಗಿ ಪರಿಣಮಿಸುತ್ತದೆ. ಈ ದೃಷ್ಟಿಯಿಂದ ಪ್ರತ್ಯಕ್ಷ ವಸ್ತುತಂತ್ರವಾದ್ದು ಮಾತ್ರ ಅಲ್ಲ; ಅನುಭವತಂತ್ರವಾದ್ದು ಕೂಡ. ವಸ್ತು, ಅನುಭವಗಳ ಸಮಷ್ಟಿ ವ್ಯಾಪಾರದಿಂದ ನಿರ್ದಿಷ್ಟವಾದ ಪ್ರತ್ಯಕ್ಷವೊಂದು ಪ್ರಸಂಗ (ಫಿನಾಮೆನನ್) ಎಂದು ಹೇಳುವವಾದ ಪ್ರಬಲವಾಗಿದೆ. ಇದಕ್ಕೆ ಫಿನಾಮೆನಾಲಾಜಿ ಎಂದು ಹೆಸರು. ಪ್ರತ್ಯಕ್ಷದಕ್ರಿಯೆ ಪ್ರಸಂದಾನುಭವ ಎಂದು ಈ ವಾದ ನಿರ್ದೇಶಿಸುತ್ತದೆ. ದೃಕ್; ದೃಶ್ಯ ಎರಡರ ನಿಕಟವ್ಯವಸ್ಥೆಯಿಂದ ಪ್ರತ್ಯಕ್ಷಜ್ಞಾನ ಬರುತ್ತದೆ.
ಇಲ್ಲಿ ವಿವೇಕದ ಪಾತ್ರ ಹಿರಿದು. ನಮ್ಮ ಇಂದ್ರಿಯ ದ್ವಾರಗಳ ಬಳಿ ಯಾವಾಗಲೂ ಅಸಂಖ್ಯಾತವಾದ ಭೌತಿಕ ಪ್ರಸಾರಗಳು ನಿಬಿಡವಾಗ ತುಂಬಿರುತ್ತವೆ. ರೂಪ, ಶಬ್ದ, ಸ್ಪರ್ಶ, ರಸನ, ಘ್ರಾಣ ಎಲ್ಲ ಬಗೆಯ ಸಂವೇದನೆಗಳಿಗೂ ವಸ್ತುವಾಗಬಲ್ಲಂಥ ಈ ಲೆಕ್ಕವಿಲ್ಲದ ಭೌತಿಕ ಪ್ರಸಾರಗಳಲ್ಲಿ ಎಲ್ಲವೂ ಸಂವೇದನೆಯ ಸ್ಥಿತಿಯನ್ನು ಮುಟ್ಟಲಾರವು. ಸಂವೇದನೆಯ ಸ್ಥಿತಿಯನ್ನು ಏರಿದ ಎಲ್ಲ ಪ್ರಸಾರಗಳೂ ಪ್ರತ್ಯಕ್ಷವಾಗಲಾರವು. ಸಂವೇದನೆಗಳಾಗಿ ಕೆಲವು ವ್ಯವಸ್ಥಿತವಾಗುತ್ತವೆ; ಈ ಕೆಲವು ಸಂವೇದನೆಗಳಲ್ಲಿ ಮತ್ತಷ್ಟು ಕೆಲವು ಪ್ರತ್ಯಕ್ಷವಾಗುತ್ತವೆ; ಪ್ರತಿವ್ಯಕ್ತಿಯೂ ತನ್ನ ಪ್ರಾಗನುಭವ, ಅಗತ್ಯ, ಮನೋವೃತ್ತಿಗಳನ್ನು ಅವಲಂಬಿಸಿ ಸಂವೇದನೆಗಳನ್ನು ಪ್ರತ್ಯಕ್ಷಗಳಾಗಿ ಪರಿವರ್ತಿಸುತ್ತಾನೆ. ಇದು ವಿವೇಕ ಎನಿಸಿಕೊಳ್ಳುತ್ತದೆ. ಪ್ರತ್ಯಕ್ಷ ಎನ್ನುವುದು ವಿವೇಕದ ವ್ಯಾಪಾರ ಎನ್ನುತ್ತಾರೆ.
	ಹೀಗೆ ಆಯ್ದುಕೊಳ್ಳುವಾಗ ದೃಶ್ಯವಸ್ತುಗಳಿಗೆ ಸನ್ನಿವೇಶದ ಚೌಕಟ್ಟುಗಳನ್ನು ಮೂಡಿಸುವುದೂ ಪ್ರತ್ಯಕ್ಷದಲ್ಲಿ ತಪ್ಪದೆ ಆಗುತ್ತದೆ. ಶಬ್ದವೊಂದನ್ನು ನಮ್ಮ ಕಿವಿಗ್ರಹಿಸಿದಾಗ ಅದು ಯಾವ ಬಗೆಯ ಶಬ್ದ, ಎಲ್ಲಿಂದ ಬಂದ ಶಬ್ದ, ಎಷ್ಟು ದೂರದ ಶಬ್ದ, ಆ ಶಬ್ದದ ತಾತ್ಪರ್ಯ ಏನು ಮುಂತಾದ ವಿವರಗಳು ಈ ಚೌಕಟ್ಟಿನಿಂದ ಸ್ಪಷ್ಟವಾಗುತ್ತದೆ. ರೈಲುಗಾಡಿಯ ಕೂಗು, ಕಾರಿನ ಶಬ್ದ, ನಾಯಿಯ ಬೊಗಳುವಿಕೆ, ಕತ್ತೆಯ ಕಿರುಚಾಟ ಎಲ್ಲವೂ ಶಬ್ದವೆ ಆದರೂ ಅದು ನಮ್ಮ ಕಿವಿಯನ್ನು ಮುಟ್ಟಿದೊಡನೆ ತಟ್ಟನೆಯೇ ನಮಗೆ ಅದು ಇಂಥದೇ ಶಬ್ದ ಎಂದು ಅರಿವಾಗುವುದಷ್ಟೆ. ಇದು ಚೌಕಟ್ಟಿನ ಕೆಲಸ. ಚೌಕಟ್ಟು ಉಂಟಾಗುವ ಮೊದಲು ವ್ಯವಸ್ಥೆಯೊಂದು ಅಗತ್ಯ. ವಸ್ತುವಿನ ವಿವರಗಳ ವರ್ಗಣೆ ಈ ವ್ಯವಸ್ಥೆಯ ಒಂದು ಅಂಗಕ್ರಿಯೆ. ಹತ್ತಾರುಜನ ಅಪರಿಚಿತರ ನಡುವೆ ಇರುವ ಪರಿಚಿತನೊಬ್ಬನನ್ನು ನಾವು ಗುರುತಿಸುವುದು ಇದರಿಂದ. ಬೇರೆ ಬೇರೆ ಬಂದ ಸಂವೇದನೆಗಳನ್ನು ಅರ್ಥವಾಗುವ ರೀತಿಯಲ್ಲಿ, ಅನುಭವದ ಆಧಾರದ ಮೇಲೆ ಸೇರಿಸಿ, ವಿಭಜಸಿ ವರ್ಗಗಳಾಗಿ ವಿಂಗಡಿಸುತ್ತೇವೆ. ಇದು ಇರಲಿಲ್ಲವಾದರೆ ಪ್ರತ್ಯಕ್ಷ ಅವಿಸಂಭಾಜ್ಯಜ್ಞಾನಘನ ಆಗಿ ಉಳಿಯುವುದಷ್ಟೆ. ಆದರಿಂದ ನಮಗೆ ಪ್ರಯೋಜನವಿಲ್ಲ.
	ವರ್ಗಣೆ ಮಾತ್ರವಲ್ಲದೆ ಅದಕ್ಕೆ ಸಹಕಾರಿಯಾಗಿ ಅಂಗವ್ಯವಸ್ಥೆಯೂ ಪ್ರತ್ಯಕ್ಷ ವ್ಯಪಾರದಲ್ಲಿ ಇರುತ್ತದೆ. ಹಲವಾರು ವಿವರಗಳನ್ನು ಬುದ್ಧಿಪೂರ್ವಕವಾಗಿ ಸೇರಿಸಿ ಅಂಗಗಳನ್ನು ಸಮಷ್ಟಿರೂಪದಲ್ಲಿ ಅಳವಡಿಸಿ ಅವುಗಳನ್ನು ನಮ್ಮ ಅನುಭವಕ್ಕೆ ತಂದು ಕೊಳ್ಳುತ್ತೇವೆ. ಮರದ ಮೇಲೊಂದು ಕಪಿ ಕುಳಿತಿದ್ದರೆ ಸಂವೇದನೆಗಳು ಇಂದ್ರಿಯಗಳನ್ನು ತಾಗುವಾಗ ಮರ ಬೇರೆ, ರೆಂಬೆ ಬೇರೆ, ಕಪಿ ಬೇರೆ ಎಂಬ ವಿವೇಕ ಇರುವುದಿಲ್ಲ. ನೇತ್ರಪಟಲದ ಮೇಲೆ ಚಿತ್ರ ಮೂಡಿಬಂದಾಗ ಈ ವಿವೇಕ ಇರುವುದಿಲ್ಲ. ಆದರೆ ನಾವು ಎಂದೂ ಮರವೆಲ್ಲ ಒಂದೇ ವಸ್ತು, ಕಪಿಯೂ ಮರದ ಅಂಗ ಎಂದು ತಿಳಿಯುವುದಿಲ್ಲ. ಮರಕ್ಕೂ ಕಪಿಗೂ ನೇತ್ರಪಟಲದಲ್ಲಿ ಏಕಾಂಗರಚನೆಯ ಸಂಬಂಧವಿದ್ದರೂ ನಮ್ಮ ಜ್ಞಾನದಲ್ಲಿ ಕಪಿಗೂ ಮರಕ್ಕೂ ಅಂಗಾಂಗಿ ಸಂಬಂಧವಿರದಷ್ಟೆ. ಮನುಷ್ಯ ತಲೆಯ ಮೇಲೆ ಟೋಪಿಯನ್ನಿಟ್ಟುಕೊಂಡಿದ್ದರೆ ತಲೆಗೆ ಸೇರಿದ ಒಂದು ಅಂಗ ಅದೆಂದು ಯಾರೂ ತಿಳಿಯುವುದಿಲ್ಲ. ಈ ಭೇದಜ್ಞಾನ ಬರುವುದು ಅಂಗವ್ಯವಸ್ಥೆಯಿಂದ.
	ಪ್ರತ್ಯಕ್ಷ ಒಂದು ಕ್ರಿಯೆಯೆಂದ ಮೇಲೆ ಅದರಲ್ಲಿ ಬೆಳೆವಣಿಗೆಯುಂಟು. ಸಂವೇದನೆಯಿಂದ ಆರಂಭವಾಗಿ ಜ್ಞಾನದಲ್ಲಿ ಅಥವಾ ಸ್ಮøತಿಯಲ್ಲಿ ಪರ್ಯವಸಾನವಾಗುವ ಈ ಕ್ರಿಯೆ ಹಲವು ಹಂತಗಳಲ್ಲಿ ಸಾಗುತ್ತದೆ. ಈ ಪ್ರತ್ಯಕ್ಷದ ಅವಿರ್ಭಾವ ಅಥವಾ ಆವಿಷ್ಕರಣದ ವಿಚಾರವಾಗಿ ಹಲವಾರು ಮಂದಿ ತಜ್ಞರು ಅಧ್ಯಯನ ಮಾಡಿದ್ದಾರೆ. ಮಗು ಜಗತ್ತನ್ನು ಅರಿಯಲು ಆರಂಭಮಾಡುವಾಗ ಪ್ರತ್ಯಕ್ಷ ಅಸ್ಪಷ್ಟವಾಗಿರುತ್ತದೆ. ವಿವರಗಳು ವಿವಿಕ್ತವಾಗಿರದೆ ಒಟ್ಟಾರೆ ಘನರೂಪದಲ್ಲಿರುತ್ತದೆ. ಇಂಥ ಗೊಂದಲದ ಪರಿಸ್ಥಿತಿಯಿಂದ ಕ್ರಮೇಣ ಪ್ರತ್ಯಕ್ಷಬೆಳೆಯುತ್ತ ಬಂದು ಒಂದೊಂದು ದೃಶ್ಯದಲ್ಲಿಯೂ ಮಗು ಅರ್ಥನಿಷ್ಪತ್ತಿಯನ್ನು ಮಾಡಿಕೊಳ್ಳುತ್ತದೆ. ಹೀಗೆಯೇ ಬಾಹ್ಯಜಗತ್ತು ಅರ್ಥವಂತವಾಗಿ ಕಾಣುವುದು. ಎಳೆಯದಾಗಿದ್ದಾಗ ಮಗುವಿಗೆ ಯಾವ ವಸ್ತು, ಏನು ಪ್ರಯೋಜನ ಎಂಬುದರ ಅರಿವೂ ಇರುವುದಿಲ್ಲ. ವಸ್ತುಗಳು ಮಗುವಿಗೂ ಮಗು ವಸ್ತುಗಳಿಗೂ ಏನೂ ಮಾಡದೆ ಇಬ್ಬರ ನಡುವೆ ಪ್ರವೃತ್ತಿ ಇರುವುದಿಲ್ಲ. ಒಂದೊಂದು ಘಟನೆಯಿಂದ ಸಂಬಂಧ ಏರ್ಪಟ್ಟು ಕಡೆಗೆ ಸನ್ನಿವೇಶದಲ್ಲಿ ಮಗು ತನ್ನ ಪ್ರವೃತ್ತಿಗಳ ತಾದಾತ್ಮ್ಯವನ್ನು ಕಾಣುತ್ತದೆ. ಈ ಪ್ರತ್ಯಕ್ಷದ ಗತಿಯಲ್ಲಿ ಚೌಕಟ್ಟು ತುಂಬ ಕೆಲಸ ಮಾಡುತ್ತದೆ. ಅದರಿಂದ ನಿರ್ದಿಷ್ಟವಾಗಿಯೇ ಅರ್ಥನಿಷ್ಪತ್ತಿ. ಒಂದೊಂದು ಪ್ರತ್ಯಕ್ಷಕ್ರಿಯೆಯಲ್ಲಿಯೂ ಬೆಳೆವಣಿಗೆ ಕಾಣಿಸುತ್ತದೆ. ಪ್ರಾರಂಭದಲ್ಲಿ ಅವಿಭಕ್ತ ಸಮಷ್ಟಿಯಾಗಿ ಅರ್ಥಜಾಲವಾಗಿ ಪರಿಣಮಿಸುತ್ತದೆ. ವಿವಿಕ್ತ ಸಂವೇದನೆಗಳು ಸ್ಥಿತಿಯನ್ನು ದಾಟಿ ಸುವ್ಯವಸ್ಥಿತ ಅರ್ಥಜಾಲವಾಗಿ ಪರಿಣಮಿಸುತ್ತದೆ. ವಿವಿಕ್ತ ಸಂವೇದನೆಗಳು ಇಲ್ಲಿ ನವ್ಯವಾದ, ಅರ್ಥಯುಕ್ತವಾದ ಸಮಷ್ಟಿ ಗ್ರಹಣದಲ್ಲಿ ಸೇರುತ್ತವೆ. ಹೀಗೆ ಸೇರಿದಾಗ ಪ್ರತ್ಯಕ್ಷ ದೃಶ್ಯವಾಗಿ ಉಳಿಯುತ್ತದೆ. ಇದು ಸ್ಮøತಿಪಥದಲ್ಲಿ ನಿಂತು ಮುಂದಿನ ಅನುಭವಗಳಿಗೆ ಹಿನ್ನಲೆ ಆಗುತ್ತದೆ. ಹಲವಾರು ಇಂಥ ದೃಶ್ಯಗಳು ಕಲಿತರೆ ಭಾವನೆ ಆಗುತ್ತದೆ. ಮನುಷ್ಯನ ಭಾವಜೀವನದಲ್ಲಿಯೂ ಬೌದ್ಧಿಕ ಜೀವನದಲ್ಲಿಯೂ ಪ್ರತ್ಯಕ್ಷದ ಪಾತ್ರ ತುಂಬ ಮುಖ್ಯವಾದುದು. ಎಲ್ಲ ಅನುಭವಗಳನ್ನೂ ಪ್ರತ್ಯಕ್ಷಕ್ಕೆ ಇಳಿಸುವವರೂ ಇದ್ದಾರೆ.
	ಸಂವೇದನೆಗಳು ಪ್ರತ್ಯಕ್ಷದ ರಚನೆಯಲ್ಲಿ ಯಾವ ಪಾತ್ರ ನಿರ್ವಹಿಸುತ್ತವೆ ಎಂಬುದು ಜಿಜ್ಞಾಸೆಗೆ ಬಂದಿರುವ ವಿಚಾರ. ಅನುಭವಿಸುವ ಮನುಷ್ಯನ ಮಟ್ಟಿಗೆ ಬಾಹ್ಯವಸ್ತುಗಳು ಹೀಗೆ ಕಾಣುತ್ತವೆ. ಅವುಗಳ ತಾತ್ಪರ್ಯ ಏನು ಎಂಬುದನ್ನು ಸೂಚಿಸುವ ಸಂಕೇತಗಳು ಇವು. ಪ್ರತಿಯೊಂದು ಪ್ರತ್ಯಕ್ಷಕ್ರಿಯೆಯಲ್ಲಿಯೂ ಸಂಕೇತ ಸಂದರ್ಭ ಇರುತ್ತದೆ. ಒಂದು ಸನ್ನಿವೇಶದ ಇಂಗಿತವನ್ನು ಧ್ವನಿಸಲು ಒಳಗೆ ಮೂಡಿಕೊಂಡ ಅಂತರದೃಶ್ಯ ಹೊರಗಿರುವ ವಸ್ತುವನ್ನು ನಿರ್ದೇಶಿಸುತ್ತದೆ. ಅದರ ಸ್ವರೂಪದ ಸಾರವನ್ನು ವರ್ಣಿಸುತ್ತದೆ. ಮನಸ್ಸಿಗೆ ಅರ್ಥವೊಂದನ್ನು ವಿಶಿಷ್ಟವಾಗಿ ಅನ್ಯಾದೃಶವಾಗಿ ನಿರೂಪಿಸುತ್ತದೆ. ಎಲ್ಲ ಸಂಕೇತಗಳೂ ಈ ಮೂರು ಕ್ರಿಯೆಗಳನ್ನು ಮಾಡುವುವು. ಪ್ರತ್ಯಕ್ಷ ಒಂದು ಸಂದರ್ಭವನ್ನು ಬಿಟ್ಟು ನಿಲ್ಲಲಾರದು. ಒಂದೇ ವಸ್ತು ಹಲವಾರು ಹಿನ್ನೆಲೆಗಳಲ್ಲಿ ಹಲವಾರು ಬಗೆಯದಾಗಿ ಕಾಣುವುದಷ್ಟೆ. ಹತ್ತಿರ, ದೂರ, ನೇರವಾಗಿ, ಪಕ್ಕಕ್ಕೆ ಬೆಳಕಿನಲ್ಲಿ ನೆಳಲಿನಲ್ಲಿ ಒಂದು ವಸ್ತುವಿದ್ದರೆ ಅದರ ಪ್ರಮಾಣ, ರೂಪ, ರೇಖೆಗಳು ಬದಲಾಗುವುವು. ಸಂದರ್ಭದ ವೈವಿಧ್ಯಕ್ಕೆ ಅನುಗುಣವಾಗಿ ಸಂವೇದನೆಗಳು ಒದಗುವ ಬಗೆಯೂ ಬದಲಾಗುತ್ತದೆ. ಹತ್ತಿರವಿದ್ದ ವಸ್ತು ದೊಡ್ಡದಾಗಿಯೂ ದೂರದಲ್ಲಿರುವ ವಸ್ತು ಸಣ್ಣದಾಗಿಯೂ ಕಾಣುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದು ಸಂದರ್ಭದ ಪ್ರಭಾವಕ್ಕೆ ಒಂದು ನಿದರ್ಶನ.
	ಸಂದರ್ಭದ ಒತ್ತಡವಿದ್ದರೂ ವಸ್ತುವಿನ ಸ್ವರೂಪ ಬಹುಮಟ್ಟಿಗೆ ಅವಿಕಾರಿಯಾಗಿಯೇ ಉಳಿಯುವುದು. ಪ್ರತ್ಯಕ್ಷದಲ್ಲಿ ಈ ಗುಣವಿರುವುದರಿಂದಲೇ ಒಂದು ವಸ್ತುವನ್ನು ನಾವು ಯಾವ ಸಂದರ್ಭದಲ್ಲಿಯಾದರೂ ಗುರುತು ಹಿಡಿಯುವುದು. ಸಂದರ್ಭ ಬದಲಾದಂತೆ ವಸ್ತುವಿನ ಉಪಲಕ್ಷಣಗಳಲ್ಲಿ ಮೇಲೆ ಹೇಳಿದಂತೆ ವಿಕಾರ ಒದಗಿದರೂ ಮೂಲಸ್ವರೂಪದಲ್ಲಿ ಯಾವ ವಿಕಾರವೂ ಉಂಟಾಗದು. ಇದಕ್ಕೆ ನೆರಳು ಬೆಳಕು ನೆರವಾಗುತ್ತವೆ. ಯಾವ ಪ್ರಭೆಯಲ್ಲಿಯಾದರೂ ವಸ್ತು ಒಂದೇ ಬಗೆ ಕಾಣುವುದಕ್ಕೆ ಪ್ರಭಾ ಅವಿಕಾರತೆ ಎನ್ನುತ್ತಾರೆ. ಯಾವ ಬಣ್ಣದ ಬೆಳಕಿನಲ್ಲಿಯಾದರೂ ಬಣ್ಣವಿಲ್ಲದ ವಸ್ತು ಬಣ್ಣವಿಲ್ಲದಂತೆಯೇ ತೋರುತ್ತದೆ. ಇದು ವರ್ಣ ಅವಿಕಾರತೆ.
	ವಸ್ತುವಿದ್ದರೆ ಅವಕಾಶವಿರದು. ಅವಕಾಶ ಅಥವಾ ಅವಕಾಶವನ್ನು ಮರೆಮಾಡಿ ಅಥವಾ ಆಕ್ರಮಿಸಿ ವಸ್ತು ಇರುತ್ತದೆ. ಸಂಸ್ಕøತದಲ್ಲಿ ಇದನ್ನು ದೇಶ ಎಂದು ವ್ಯವಹರಿಸುತ್ತಾರೆ. ಎರಡು ವಸ್ತುಗಳ ನಡುವೆ ಇರುವ ದೇಶ ಅಥವಾ ಅವಕಾಶ ಪ್ರತ್ಯಕ್ಷಕ್ಕೆ ವಿಷಯವಾಗುತ್ತದೆ. ಇದಕ್ಕೆ ದೇಶ ಪ್ರತ್ಯಕ್ಷ ಎಂದು ಹೆಸರು. ವಸ್ತುಗಳ ಸಂವೇದನೆ ಉಂಟಾಗುವಾಗಲೇ ವಸ್ತುಗಳ ನಡುವೆ ಇರುವ ಸ್ವತಂತ್ರ ಶೂನ್ಯವಕಾಶವನ್ನೂ ಅನುಮಾನದಿಂದ ಪ್ರತ್ಯಕ್ಷ ಅರಿತುಕೊಳ್ಳುತ್ತದೆ. ದೇಶ ನೇರವಾಗಿ ಸಂವೇದನೆಗೆ ಪ್ರಚೋದಕವಾಗಲಾಗದು. ಆದರೂ ಪ್ರತ್ಯಕ್ಷದ ಮಟ್ಟಿಗೆ ಇದು ಇದ್ದೇ ತೀರಬೇಕು. ವಸ್ತು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹೋಗುವಾಗ ಕಾಣಬರುವ ಚಲನೆಯೂ ಈ ದೇಶಪ್ರತ್ಯಕ್ಷದಲ್ಲಿ ಸೇರಿಬರುವ ಅಂಶ. ಕಣ್ಣಿನಿಂದ ನೋಡಿದ ಅಥವಾ ಕೈಯಿಂದ ಮುಟ್ಟಿದ ವಸ್ತುಗಳು ಇಷ್ಟೇ ಅಂತರದಲ್ಲಿ ಇವೆ ಎಂದು ನಾವು ಹೇಳಬಹುದಷ್ಟೆ. ಕತ್ತಲೆಯಲ್ಲಿ ಸಾಮಾನನ್ನು ಹುಡುಕುವಾಗ ಕೈ ಹಲವಾರು ವಸ್ತುವಿನಿಂದ ಪ್ರತ್ಯಕ್ಷ ನಿರ್ಗಮನ ಮಾಡುತ್ತದೆ. ಚಲನಕ್ರಿಯೆಗೆ ಅಡ್ಡಿ ಬಾರದೆ ಇರುವ ಶುದ್ಧಾವಕಾಶ ಅಥವಾ ಶೂನ್ಯಾವಕಾಶ ಮತ್ತು ಚಲನೆಗೆ ಅಡ್ಡಿ ಬರುವ ಪೂರಿತಾವಕಾಶ ಈ ಎರಡು ವಿಚಾರಗಳ ಬಗ್ಗೆ ನೂರಾರು ಸಂಶೋಧನೆಗಳು ನಡೆದಿವೆ. ಕುರುಡರು ತಡಕಾಡುತ್ತ ಓಡಾಡುವಾಗ ಅವರಿಗೆ ದೇಶಪ್ರತ್ಯಕ್ಷದಿಂದ ಹೇಗೆ ನೆರವು ದೊರೆಯುತ್ತದೆ. ಎಂಬ ಸಮಸ್ಯೆಯನ್ನು ಬಿಡಿಸಲು ಮನಶ್ಯಾಸ್ತ್ರಜ್ಞರು ಯತ್ನಿಸಿದ್ದಾರೆ.
	ದೂರ ಮತ್ತು ದಿಕ್ಕು ದೇಶಪ್ರತ್ಯಕ್ಷದಲ್ಲಿ ಬರುವ ಮುಖ್ಯ ವಿವರಗಳು ವಸ್ತು ಇದ್ದರೆ ಅದರ ಸಾಪೇಕ್ಷತೆಯಿಂದ ಉಳಿದ ವಸ್ತುಗಳಿಗಿರುವ ಅಂತರ, ದೂರ, ದಿಕ್ಕು ಮುಂತಾದ ವಿವರಗಳನ್ನು ಅನುಮಾನಿಸಿಕೊಳ್ಳುತ್ತೇವೆ. ವಸ್ತುವಿನಿಂದ ದೇಶವಿಚ್ಛಿನ್ನವಾಗಿದೆಯೆಂದು ಕಂಡುಬಂದರೂ ದೇಶಕ್ಕೆ ವಿಚ್ಛಕ್ತಿ ಇಲ್ಲ. ಎಲ್ಲ ದಿಕ್ಕುಗಳಲ್ಲಿಯೂ ಅನಂತದೂರದವರೆಗೆ ದೇಶ ಪ್ರಸ್ತುತವಾಗಿರುತ್ತದೆ. ದೇಹವೊಂದು ಮಾಪಕದಂತೆ ದೇಶಪ್ರತ್ಯಕ್ಷಕ್ಕೆ ನೆರವಾಗುತ್ತದೆ. ದೇಹದ ಮುಂದೆ, ಹಿಂದೆ ಎಡಗಡೆ, ಬಲಗಡೆ, ಮೇಲೆ, ಕೆಳಗೆ ಇವು ಮುಖ್ಯ ದಿಕ್ಕುಗಳು. ಎಲ್ಲ ವಸ್ತುಗಳೂ ಯಾವುದಾದರೂ ಒಂದು ದಿಕ್ಕಿನಲ್ಲಿ ನಿರ್ದಿಷ್ಟ ಅಂತರದಲ್ಲಿ ಕಾಣಿಸಿಕೊಳ್ಳುತ್ತವೆ. ಈ ತೋರಿಕೆಯಿಂದಾಗಿ ಮನುಷ್ಯನ ಅನುವರ್ತನೆ ರೂಪುಗೊಳ್ಳುತ್ತದೆ. ಉದ್ದವಾಗಿ, ಅಡ್ಡಲಾಗಿ, ಹತ್ತಿರ ದೂರ ಮುಂತಾದ ವಿವರಗಳು ಈ ಅನುವರ್ತನೆಯಿಂದ ಉಂಟಾಗುವುವು. ವಸ್ತು ಇದೇ ಸ್ಥಳದಲ್ಲಿ ಇದೆ ಎಂಬ ನಿರ್ದೇಶನ ವಸ್ತುವಿನ ಆಕಾರ, ಪ್ರಮಾಣ ಇವು ಕೂಡ ಹೀಗೆಯೇ ಪ್ರತ್ಯಕ್ಷ ವೃತ್ತಿಯಿಂದ ಉಂಟಾಗುವುವು.
ದೇಶದ ಪ್ರಸರಣಿಯಿರುವುದು ತ್ರಿಭಂಗಿಯಲ್ಲಿ. ವಸ್ತು ದೂರದಲ್ಲಿದೆಯೆಂದು ನಮಗೆ ಭಾಸವಾದರೆ ಇಲ್ಲಿ ಮೂರು ಭಂಗಿಗಳ ಪ್ರತ್ಯಕ್ಷವಿದೆ. ಅವಕಾಶವಿದ್ದು ಬೆಳಕೂ ಇದ್ದರೆ ವಸ್ತು ಎಷ್ಟು ದೂರದಲ್ಲಿ ಆದರೂ ಕಾಣಿಸುತ್ತದೆ. ಒಂದು ವಸ್ತು ಮತ್ತೊಂದು ವಸ್ತುವಿನ ಮುಂದಿದ್ದರೆ, ಸಂಪೂರ್ಣವಾಗಿ ಮೈರೇಖೆಯಿರುವ ವಸ್ತು ಹತ್ತಿರದಲ್ಲಿರುವಂತೆಯೂ ಅಸಂಪೂರ್ಣವಾದ ಮೃರೇಖೆಯುಳ್ಳ ವಸ್ತು ಅದರ ಹಿಂದೆ ತುಸು ದೂರದಲ್ಲಿ ಇರವಂತೆಯೂ ವ್ಯಕ್ತವಾಗುತ್ತದೆ. ದೂರದಲ್ಲಿರುವ ವಸ್ತುಗಳು ಸಣ್ಣದಾಗಿಯೂ ಹತ್ತಿರದಲ್ಲಿರುವ ವಸ್ತುಗಳು ದೊಡ್ಡದಾಗಿಯೂ ಕಾಣಿಸುತ್ತವೆ. ಅಸ್ಪಷ್ಟವಾಗಿ, ಮಂಜು ಮುಸುಕಿದಂತೆ, ವಿವರಗಳಿಲ್ಲದೆ ತೋರಿವ ವಸ್ತು ದೂರದಲ್ಲಿದ್ದಂತೆ ಭಾಸವಾಗುತ್ತದೆ; ಬೆಳಕಿನಲ್ಲಿರುವ ವಸ್ತು ಹತ್ತಿರದಲ್ಲಿ ಇರುವಂತೆಯೂ ನೆರಳಿನಲ್ಲಿರುವ ವಸ್ತು ದೂರ ಇರುವಂತೆ ವ್ಯಕ್ತವಾಗುತ್ತವೆ. ಇದಕ್ಕೆ ವಿಹಂಗಮ ನೋಟ ಎಂದು ಹೆಸರು. ನೆರಳು ಬೆಳಕುಗಳ ಚೆಲ್ಲಾಟದಲ್ಲಿ ನೆರಳು ವಸ್ತುವಿನ ಆಕಾರವನ್ನು ಅವಲಂಬಿಸಿ ಬೆಳಕಿನಿಂದ ಇರುವ ಅಂತರ, ಬೆಳಕಿರುವ ದಿಕ್ಕು ಇವನ್ನೂ ಅಧಿಕರಿಸಿ ನಿರ್ದಿಷ್ಟ ಆಕಾರಗಳನ್ನು ತಳೆಯುತ್ತದೆ. ತೀರ ದೂರ ಇದ್ದ ವಸ್ತುಗಳೂ ತೀರ ಹತ್ತಿರ ವಸ್ತುಗಳೂ ಸರಿಯಾದ ಅರಿವಿಗೆ ಬರುವುದು ಕಷ್ಟ; ದೇಶಪ್ರತ್ಯಕ್ಷವೂ ಕುಂಠಿತವಾಗುತ್ತದೆ. ನಿದರ್ಶನಕ್ಕೆ ಆಕಾಶದಲ್ಲಿ ಚಂದ್ರ ನಕ್ಷತ್ರಗಳು ಎಲ್ಲವೂ ಒಂದೇ ದೂರದಲ್ಲಿರುವಂತೆ ಭಾಸವಾಗುವುದಿಲ್ಲವೆ? ವಾಸ್ತವವಾಗಿ ವಿಭಿನ್ನ ಅಂತರಗಳಲ್ಲಿ ವಿಭಿನ್ನ ದೂರದಲ್ಲಿ ನಕ್ಷತ್ರಗಳೂ ಚಂದ್ರನೂ ಇರುವುವು. ಅತಿದೂರದಲ್ಲಿ ವಿವೇಕ ಮೂಡುವುದು ಕಷ್ಟ.

ಚಲನೆಯ ಪ್ರತ್ಯಕ್ಷವೂ ದೇಶಪ್ರತ್ಯಕ್ಷದ ಅಂಗಗಳಲ್ಲಿ ಒಂದು. ಸ್ಥಿತಿಯಲ್ಲಿ ಅನುಕ್ರಮವಾದ ಅವಿರತವಾದ ವ್ಯತ್ಯಾಸ ಕಂಡುಬಂದರೆ ವಸ್ತು ಚಲಿಸುತ್ತಿದೆಯೆಂದು ಭಾಸವಾಗುತ್ತದೆ. ಓಡಾಡುತ್ತಿರುವ ಮನುಷ್ಯ, ಆಗಸದಲ್ಲಿ ಕದಲುತ್ತಿರುವ ಮೋಡಗಳು ಮುಂತಾದ ಚಲನೆಗಳಲ್ಲಿ ಈ ನಿಯಮ ಕಂಡುಬರುತ್ತದೆ. ಚಲಿಸದೆ ಇರುವ ಹಿನ್ನೆಲೆಯಲ್ಲಿ (ದಾರಿ, ಆಕಾಶ ಇತ್ಯಾದಿ) ಚಲನೆ ತಟ್ಟನೆ ಭಾಸವಾಗುತ್ತದೆ. ಈ ಚಲನೆ ದೃಷ್ಟಿಚಲನೆ ಎನಿಸಿಕೊಳ್ಳುತ್ತದೆ. ಗಡಿಯಾರದ ಮುಳ್ಳು ಚಲಿಸುವುದು ನಮಗೆ ಗೋಚರವಾಗುವುದಿಲ್ಲ. ಆದರೂ ಮುಳ್ಳು, ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿತಿಗೆ ಬಂದಾಗ ಮುಳ್ಳು ತಿರುಗಿದೆಯೆಂದು ನಾವು ಎಣಿಸುತ್ತೇವೆ. ಇದು ಅನುಮಿತಚಲನೆ. ವ್ಯತ್ಯಸ್ತಸ್ಥಿತಿಯಿಂದ ಚಲನೆಯಾಗಿದೆಯೆಂದು ಊಹಿಸಿಕೊಳ್ಳಬೇಕಷ್ಟೆ. ಒಂದು ಇಂದ್ರಿಯ ಸ್ಥಾನವನ್ನು ಅನುಕ್ರಮವಾಗಿ ಉತ್ತೇಜಿತಗೊಳಿಸಿದರೆ ಅದು ಚಲನೆಯ ಭಾಸವನ್ನು ಉಂಟುಮಾಡುತ್ತದೆ. ಎಡೆಬಿಡದೆ ಚಲನೆಯಾಗುತ್ತಿದೆಯೆನ್ನಲು ಈ ಉತ್ತೇಜನ ಸಾಕಷ್ಟು ಧ್ರುತಗತಿಯಲ್ಲಿರಬೇಕು; ಆಗ ನೇತ್ರಪಟಲದಲ್ಲಿ ಅವ್ಯಾಹತ ಚಿತ್ರಸಂತತಿ ಇರುತ್ತದೆ. ಹಕ್ಕಿ ಆಕಾಶದಲ್ಲಿ ಹಾರುತ್ತಿರುವಾಗ ವೇಗ ಹೆಚ್ಚಾಗಿದ್ದರೆ ಅದರ ಚಲನೆ ಕಾಣುವುದಿಲ್ಲ. ಒಂದೇ ಒಂದು ಗೆರೆಯಂತೆ ಕಾಣುತ್ತದೆ. ಅಥವಾ ಹಾರುವ ವೇಗ ತುಂಬ ವಿಳಂಬವಾದರೆ ಆಗಲೂ ಚಲನೆ ಕಾಣುವುದಿಲ್ಲ;

	ಈ ತತ್ತ್ವವನ್ನು ಅನುಸರಿಸಿ ಮಾಕ್ಸ್ ವರ್ತೈಮರ್ ಎಂಬ ಜರ್ಮನ್ ಮನಶ್ಯಾಸ್ತ್ರಜ್ಞ ಶುದ್ಧಚಲನೆಯನ್ನು ಅಧ್ಯಯನಮಾಡಿದ. ನೆಟ್ಟಗೆ ನಿಂತ ಉದ್ದನೆಯ ಗೆರೆಯ ಒಂದು ಚಿತ್ರ ಸ್ವಲ್ಪ ಓರೆಯಾಗಿ ನಿಂತಿರುವ ಗೆರೆಯ ಇನ್ನೊಂದು ಚಿತ್ರ ಸೆಕೆಂಡುಗಳಷ್ಟು ಇದ್ದಾಗ ಮೊದಲು ಒಂದು ಚಿತ್ರ ಕಂಡು ಅನಂತರ ಇನ್ನೊಂದು ಚಿತ್ರ ಎರಡನ್ನೂ ಒಂದಾದ ಮೇಲೆ ಇನ್ನೊಂದನ್ನು ತೋರಿಸಿದ. ಎರಡಕ್ಕೂ ಅಂತರ 1/5 ಸೆಕೆಂಡುಗಳಷ್ಟು ಇದ್ದಾಗ ಮೊದಲು ಒಂದು ಚಿತ್ರ ಕಂಡು ಅನಂತರ ಇನ್ನೊಂದು ಕಾಣುತ್ತದೆ. ಅನಂತರ 1/13 ಸೆಕೆಂಡುಗಳಷ್ಟು ಕಮ್ಮಿಯಾದಾಗ ಎರಡೂ ಒಂದರ ಪಕ್ಕದಲ್ಲಿ ಇನ್ನೊಂದು ಕಾಣಿಸಿಕೊಳ್ಳುತ್ತದೆ. ಎರಡೂ ಅಂತರಗಳಿಗೆ ನಡುವಣ ಅಂತರವಿದ್ದಾಗ ನೆಟ್ಟಗೆ ನಿಂತ ಗೆರೆಯೇ ಓರೆಯಾಗಿ ಕದಲಿದಂತೆ ಭಾಸವಾಗುತ್ತದೆ. ಇಲ್ಲಿ ವಾಸ್ತವವಾಗಿ ಯಾವ ಚಲನೆಯೂ ಇರದು. ಕಾಣಿಸುವ ಚಲನೆ ಆಭಾಸ ಮಾತ್ರ. ಈ ಆಭಾಸಕ್ಕೆ ಚಿತ್ರಗಳಲ್ಲಿ ಸಮರ್ಥನೆಯಿಲ್ಲ. ಎರಡು ಸಂವೇದನೆಗಳನ್ನು ಸೇರಿಸಿದರೆ ಚಲನೆ ಆಗುವುದಿಲ್ಲ. ಚಲನೆಯೆಂಬುದು ಪ್ರತ್ಯಕ್ಷದ ಸಮಷ್ಟಿವ್ಯುತ್ಪತ್ತಿವ್ಯಾಪಾರ. ವರ್ತೈಮರ್ ಇದನ್ನು ಫೈ-ಪ್ರಸಂಗ ಎಂದು ಕರೆದ. ಇದರ ಇಂಗಿತ ತುಂಬ ಪ್ರಭಾವಶಾಲಿಯಾಗಿ ಸಮಷ್ಟಿಸ್ಪೋಟ ಸಂಪ್ರದಾಯಕ್ಕೆ ಬುನಾದಿಯಾಯಿತ.

ಪ್ರತ್ಯಕ್ಷವೆಂದರೆ ಸಂವೇದನೆಗಳ ಅರಿವು ಎಂದು ಹಳೆಯ ಮನಶ್ಯಾಸ್ತ್ರಜ್ಞರು. ಟಚ್ನರ್‍ನ ಮತವನ್ನು ಅನುಸರಿಸಿ, ನಂಬಿದ್ದರು. ಆದರೆ ಎಹ್‍ರೆನ್‍ಫೆಲ್ಸ್ ಮುಂತಾದವರು ಈ ಗುಣ ಪ್ರತ್ಯಕ್ಷದಲ್ಲಿದ್ದರೂ ಇದೇ ಪ್ರತ್ಯಕ್ಷವೆನ್ನಲಾಗದು, ಸಂವೇದನೆಗಳ ನಡುವೆ ಉಂಟಾಗುವ ಸಂಬಂಧ, ಕಲ್ಪನೆಗಳ ಜಾಲದಲ್ಲಿ ವ್ಯಕ್ತವಾಗುವ ಕಲ್ಪನೆಗಳು ಎಲ್ಲವೂ ಸೇರಿ ಸಮಷ್ಟಿಯ ಧರ್ಮವೊಂದರಲ್ಲಿ ರೂಪಗುಣದಂತೆ ತೋರುವುದೇ ಪ್ರತ್ಯಕ್ಷ ಎಂಬ ವಾದವನ್ನು ಮಂಡಿಸಿದರು. ಇದು ಮುಂದೆ ಗೆಸ್ಟಾಲ್ಟ್ ಪದ್ಧತಿಗೆ ಎಡೆಮಾಡಿಕೊಟ್ಟಿತು.

ಪ್ರತ್ಯಕ್ಷದಲ್ಲಿ ಮುಖ್ಯವಾದ ಅಂಶವೆಂದರೆ ವ್ಯವಸ್ಥೆ; ಹಲವಾರು ಅಂಗಗಳನ್ನು ವಿಶಿಷ್ಟವಾದ ಶೈಲಿಯಲ್ಲಿ ಸಂಘಟಿಸಿ ಕಾಣುವ ಈ ವ್ಯವಸ್ಥೆಯನ್ನು ಒಡೆದರೆ ಅದರ ತಾತ್ಪರ್ಯ ನಿಲ್ಲುವುದಿಲ್ಲ. ತಾತ್ಪರ್ಯ ಅಂಗಗಳಲ್ಲಿ ಇರದು; ಎಲ್ಲ ಅಂಗಗಳೂ ಒಟ್ಟಾರೆ ಸೇರಿದರೆ ಆ ಸೇರುವಿಕೆಯಲ್ಲಿ ತಾತ್ಪರ್ಯ ಮೂಡಿಬರುತ್ತದೆ. ಈ ತತ್ತ್ವವನ್ನು ಅವರು ಪ್ರಮುಖವಾಗಿ ಪ್ರತ್ಯಕ್ಷವ್ಯಾಪಾರಕ್ಕೆ ಅನ್ವಯಿಸಿದರು.

ವರ್ತೈಮರ್ ಈ ವಿಚಾರವಾಗಿ ಗಾಢವಾದ ಅನ್ವೇಷಣೆ ನಡೆಸಿ ಪ್ರತ್ಯಕ್ಷದಲ್ಲಿ ಅವಶ್ಯವಾಗಿ ಇರುವ ನಿಯಮಗಳನ್ನು ನಿರೂಪಿಸಿದ್ದಾನೆ. ವಸ್ತುಗಳು

(ಅ) ಸಾಮೀಪ್ಯದಿಂದ ನಿಬದ್ಧವಾಗಿ ವರ್ಗಗಳಲ್ಲಿ ಸೇರುತ್ತವೆ.

ಚಿತ್ರ-1

	(ಆ) ಸಾದೃಶ್ಯವೂ ಹೀಗೆಯೇ ವಸ್ತುಗಳನ್ನು ಸೇರಿಸುವ ವ್ಯವಧಾನಗಳಲ್ಲಿ ಒಂದು.

ಚಿತ್ರ-2
	(ಇ) ಸಮಾನಗತಿ ಇನ್ನೊಂದು ನಿಯಮ.

	(ಈ) ಸುಭದ್ರಸ್ಥಿತಿಯೆಂಬ ನಿಯಮದಲ್ಲಿರುವ ರೂಪ ಏರುಪೇರಿಲ್ಲದೆ ಸುವ್ಯವಸ್ಥಿತವಾಗಿರುವುದು. ಪ್ರತ್ಯಕ್ಷದ ಅಗತ್ಯ.

	(ಉ) ವಾಸ್ತವಿಕ ಹಾಗೂ ಆಂತರಿಕ ವ್ಯವಸ್ಥೆ . ಒಂದು ಬಗೆಯ ರೂಪಗಳು ಸ್ವಸಂಪೂರ್ಣವಾಗಿ ಮೈದಳೆಯುತ್ತವೆ. 

	ಸಾಮಾನ್ಯವಾಗಿ ನಮಗೆ ಪರಿಚಯದಲ್ಲಿರುವ ಆಕಾರಗಳು ತಟ್ಟನೆ ಭಾಸವಾಗುತ್ತವೆ. ಒಂದು ವೇಳೆ ಈ ಆಕಾರಗಳಲ್ಲಿ ಅಲ್ಪಸ್ವಲ್ಪ ಊನವಿದ್ದರೂ ಕಣ್ಣು ಆ ಊನಗಳನ್ನು ಗಮನಿಸುವುದಿಲ್ಲ ಅಸಂಪೂರ್ಣವಾಗಿರುವುದನ್ನು ಕಣ್ಣು ಮತ್ತು ಮನಸ್ಸು ಪೂರ್ಣವನ್ನಾಗಿ ಮಾಡುವ ಸಹಜಪ್ರವೃತ್ತಿಯೂ ಪ್ರತ್ಯಕ್ಷದಲ್ಲಿ ಕಾಣುತ್ತದೆ. ಇದಕ್ಕೆ ಪೂರ್ಣತೆಯ ಪ್ರಸಂಗ ಎನ್ನುತ್ತಾರೆ. ಎಲ್.ಎಲ್.ತರ್ಸ್‍ಟನ್ ಎಂಬ ಸಂಶೋಧಕ ಪ್ರತ್ಯಕ್ಷದ ಅಂಗಗಳನ್ನು, ಅಂಶಗಳನ್ನು ಕುರಿತು ನಡೆಸಿದ ಪ್ರಯೋಗಗಳ ಫಲವಾಗಿ ಈ ಪೂರ್ಣತೆಯೆಂಬ ವಿವರಣೆಗೆ ಬೆಂಬಲವಿತ್ತ. ಅವ್ಯವಸ್ಥಿತವಾದ ವಸ್ತುವನ್ನು, ಅಸ್ಪಷ್ಟವಾದ ಆಕಾರವನ್ನು ನಾವು ವ್ಯವಸ್ಥಿತ ಸ್ಪಷ್ಟ ಸುರೂಪದ್ದನ್ನಾಗಿ ಕಾಣುತ್ತೇವೆಂಬುದು ನಿಜವೆಂದು ಆತನ ವಾದ. ಪ್ರತ್ಯಕ್ಷ ಪೂರ್ಣತೆಗೆ ಸೌಲಭ್ಯವಿದೆ. ಸ್ಥೈರ್ಯ ಇದೆ ಎಂಬುದು ಆತನ ಸಂಶೋಧನೆಗಳಿಂದ ಹೊರಬಿದ್ದಿತು. ದೃಕ್ಪ್ರತ್ಯಕ್ಷದಲ್ಲಿ ಮಾತ್ರ ಅಲ್ಲದೆ ಶ್ರವಣ ಪ್ರತ್ಯಕ್ಷದಲ್ಲಿಯೂ ಈ ನಿಯಮ ಕಂಡುಬಂದಿತು. ಎಂ. ಡಿ. ವರ್ನನ್ ಎಂಬಾಕೆಯ ಸಂಭಂಧನೆಗಳಿಂದಲೂ ಈ ತತ್ತ್ವಪುಷ್ಟವಾಯಿತು. ಪ್ರತ್ಯಕ್ಷವೆಂಬ ಸಾಮಥ್ರ್ಯದ ವಿವಿಧ ರೀತಿಗಳನ್ನು ಈಕೆ ಕೂಲಂಕಷವಾಗಿ ಅಧ್ಯಯನ ಮಾಡಿದಳು.
ವಿಪರೀತಜ್ಞಾನದ (ಇಲ್ಯೂಷನ್) ಮೇಲೆ ನಡೆಸಿರುವ ಅಧ್ಯಯನಗಳಿಂದ ಪ್ರತ್ಯಕ್ಷದ ಪ್ರಕಾರಗಳು ಹಲವಾರು ಸ್ಪಷ್ಟವಾಗಿವೆ. ವಿಪರೀತಜ್ಞಾನ ಪ್ರತ್ಯಕ್ಷದ ಸ್ವಭಾವದ್ದೇ. ಇಲ್ಲಿಯೂ ವಸ್ತುಗಳ ಅಗತ್ಯವಿದೆ. ಆದರೆ ಅನುಭವದಲ್ಲಿ ವಸ್ತುಗಳ ಯಥಾರ್ಥಜ್ಞಾನವಿರದೆ ಅನ್ಯಥಾಜ್ಞಾನ ಒಂದು ಒದಗುವುದು. ಇದಕ್ಕೆ ಕಾರಣ ಇಂದ್ರಿಯ ದೋಷವಲ್ಲ, ಅಥವಾ ಮನಸ್ಸಿನ ಪೂರ್ವಾಗ್ರಹವಲ್ಲ; ತಾತ್ಪರ್ಯ ವಿಷ್ಪತ್ತಿಯಲ್ಲಿ ಬರುವ ತೊಡಕು ಅಷ್ಟೆ. ಈ ತೊಡಕಿಗೆ ವಸ್ತು ಭಾಸವಾಗುವ ಸಂದರ್ಭವೇ ಕಾರಣ. ಮುಲರ್ ಲಯರ್, ಪಾಗನ್ ಡಾರ್ಫ್, ಹೆರಿಂಗ್, ಲ್ಯಾಡ್ ಫ್ರಾಂಕ್ಲಿನ್ ಮುಂತಾದ ವಿಪರೀತಜ್ಞಾನ ಚಿತ್ರಗಳು ಈ ನಿಯಮಕ್ಕೆ ನಿದರ್ಶನಗಳು. ಸಾಮಾನ್ಯ ಮನುಷ್ಯರೆಲ್ಲ ಈ ವಿಪರೀತಜ್ಞಾನಕ್ಕೆ ಬದ್ಧರು. ಅದು ವಿಪರೀತಜ್ಞಾನವೆಂದು ತಿಳಿದ ಮೇಲೂ ದರ್ಶನ ಬದಲಾಗದೆ ಇರುವುದು ಇದರ ವೈಶಿಷ್ಟ್ಯ. ಇಲ್ಲಿ ಪೂರ್ವವ್ಯವಸ್ಥೆ, ಸಂಬಂಧಗ್ರಹಣ, ಸಹಜದೇಶ ವ್ಯವಸ್ಥೆ. ಬಾಯಪ್ರಸಂಗದ ಒತ್ತಡ, ಸಮಷ್ಟಿದರ್ಶನ ಮುಂತಾದ ವಿವರಣೆಗಳನ್ನು ಮನಶ್ಯಾಸ್ತ್ರಜ್ಞರು ಕೊಟ್ಟಿದ್ದಾರೆ.

	ರೂಬಿನ್ ಎಂಬಾತ ಪ್ರತ್ಯಕ್ಷದಲ್ಲಿ ರೂಪ. ಕ್ಷೇತ್ರ ಎಂಬ ದ್ವಂದ್ವಪ್ರವೃತ್ತಿಗಳನ್ನು ನಿರೂಪಿಸಿ, ಈ ಇಬ್ಭಾಗದ ವಿಭಜನೆಯಲ್ಲಿ ಮಾನಸಿಕ ವಿವರಗಳನ್ನು ಪ್ರಮುಖವೆಂದಿದ್ದಾನೆ. ತ್ರಿಭಂಗಿ ದೇಶಪ್ರತ್ಯಕ್ಷ ಇದಕ್ಕೆ ಸಹಕಾರಿಯಾಗುವುದೆಂದು ಅವನ ವಾದ. ಕಾಗದದ ಮೇಲೆ ಯಾವುದಾದರೂ ಸರಳರೇಖೆಯನ್ನು ಬೆರೆದರೂ ರೂಪ, ಕ್ಷೇತ್ರಗಳು ವ್ಯವಸ್ಥಿತವಾಗುತ್ತದೆ. ಕ್ಷೇತ್ರ ಸಾಮಾನ್ಯವಾಗಿ ನಿರಾಕಾರದಂತೆ ಭಾಸವಾಗುತ್ತದೆ. ರೂಪ ಮುಂದೆ ಇದ್ದಂತೆ ತೋರಿದರೆ ಕ್ಷೇತ್ರ ಅದರ ಹಿಂದೆ ಅಪರ್ಯಾಪ್ತವಾಗಿ. ಅವಿಚ್ಛಿನ್ನವಾಗಿ ಇರುತ್ತದೆ. ರೂಪದಿಂದ ಕ್ಷೇತ್ರ ಹರಿದಂತೆ ತೋರುವುದಿಲ್ಲ. ರೂಪ ವಸ್ತುವಿನಂತೆಯೇ ಘನರೂಪದ್ದಾಗಿರುವಂತೆ ಭಾಸವಾಗುತ್ತದೆ. ಕ್ಷೇತ್ರವಾದರೋ ಅವ್ಯಾಕೃತವಿದ್ದಂತೆ ಇರುತ್ತದೆ. ರೂಪವೇ ತಟ್ಟನೆ ಕಣ್ಣಿಗೆ ಬೀಳುವುದು, ಅದೇ ಸ್ಮøತಿಯಲ್ಲಿ ಉಳಿಯುವುದು. ಏಕೆಂದರೆ ಅದರಲ್ಲಿ ಅರ್ಥನಿಷ್ಟತ್ತಿಯ ಸೌಲಭ್ಯ ಹೆಚ್ಚು. ರೂಬಿನ್ ನಡೆಸಿದ ಪ್ರಯೋಗಗಳನ್ನು ಏರನ್‍ಸ್ಟೈನ್ ಎಂಬಾತ ಮತ್ತೆ ನಡೆಸಿ ಹಲವಾರು ಹೊಸ ವಿವರಗಳನ್ನು ಕಂಡುಹಿಡಿದ. ಇವನ ಪ್ರಕಾರ ಎಲ್ಲ ಪ್ರತ್ಯಕ್ಷದಲ್ಲೂ ರೂಪ-ಕ್ಷೇತ್ರ ವಿಭಾಗ ಅನಿವಾರ್ಯವೇನಲ್ಲ. ಅಲ್ಲದೆ ರೂಪ ಕ್ಷೇತ್ರಕ್ಕಿಂತ ಹತ್ತಿರ ಇದ್ದಂತೆ ತೋರಬೇಕೆಂಬ ನಿಯಮವೂ ಇಲ್ಲ. ರೂಪನಿಷ್ಟತ್ತಿಯಲ್ಲಿ ವ್ಯವಸ್ಥಿತ ಆಕಾರದ ಪಾತ್ರ ಉಂಟೆಂಬುದನ್ನು ಈತ ತೋರಿಸಿದ. ಸರಳನಕ್ಷೆಗಳಿಂದ ರೂಪ ಎದ್ದು ಕಾಣುವುದೆಂದು ಈತನ ವಾದ. ಮೇಲೆ ಹೇಳಿದ ವರ್ನನ್ ಎಂಬ ಸಂಶೋಧಕಿ ಸಂಗೀತ ಪ್ರತ್ಯಕ್ಷದ ವಿಚಾರವಾಗಿ ಪ್ರಯೋಗಗಳನ್ನು ನಡೆಸಿ ಹಲವಾರು ವಿವರಗಳನ್ನು ನಿರೂಪಿಸಿದಳು. ಈಕೆಯೂ ರೂಪ ಕ್ಷೇತ್ರ ವಿಭಜನೆಯೂ ತತ್ತ್ವವನ್ನು ಅಂಗೀಕರಿಸಿ ಕ್ಷೇತ್ರದ ಶಬ್ಧಕ್ಕಿಂತ ರೂಪದ ಶಬ್ಧ ತೀವ್ರತರವಾಗಿಯೂ ತಾರತರ ಸ್ಥಾಯಿಯಲ್ಲಿಯೂ ಇರುವುದೆಂದು ತೋರಿಸಿದಳು ಎರಡರ ರಚನೆಯೂ ವಿಭಿನ್ನವಾದುದು, ರೂಪದಲ್ಲಿ ಗತಿಯುಂಟು, ಮೂರ್ತಿಮಂತವಾದ ಲಯ ಉಂಟು ಎಂದು ಮುಂತಾಗಿ ವಿವರಿಸಿದಳು. ನಮ್ಮ ಸಂಗೀತದಲ್ಲಿ ಶ್ರುತಿಗೂ ಸ್ವರಕ್ಕೂ ಇರುವ ಸಂಬಂಧವನ್ನು ರೂಪ-ಕ್ಷೇತ್ರಗಳ ನಡುವೆ ಇರುವ ಸಂಬಂಧವೆಂದೇ ಕೆಲವರು ಬಣ್ಣಿಸುತ್ತಾರೆ.
	ಇದು ಹೇಗಾದರೂ ಇರಲಿ. ರೂಪ-ಕ್ಷೇತ್ರಗಳ ಜಿಜ್ಞಾಸೆಯಿಂದ ಮತ್ತೊಂದು ವಿವರ ಪ್ರಾಶಸ್ತ್ಯ ಪಡೆಯಿತು. ಅದು ಮೈಮೇರೆ (ಕಾಂಟೂರ್) ಎಂಬುದು. ಈ ಮೈಮೇರೆ ಇರದಿದ್ದದೆ ರೂಪವಾಗುವುದೇ ಇಲ್ಲ. ಈ ಕಾರಣದಿಂದ ಇದನ್ನು ರೂಪೋತ್ಪಾದಕ ಎಂದು ನಿರ್ದೇಶಿಸುತ್ತಾರೆ. ಮೈಮೇರೆ ಎಂದರೆ ಆಕಾರ ಎಂಬುದಕ್ಕೆ ಸಮವಲ್ಲ. ಒಂದು ಕ್ಷೇತ್ರದಲ್ಲಿ ಎರಡು ರೂಪುಗಳು ಮೈದಳೆದು. ಮೈಮೇರೆ ಒಂದೇ ಇದ್ದು ಆಕಾರಗಳು ವಿಭಿನ್ನವಾಗಿ ಇರಬಹುದು. ರೂಬಿನ್ ಗಾಲಿ, ಹೋಕ್ ಹೀಮರ್ ಮುಂತಾದವರು ಮೈಮೇರೆಯ ವಿವರಗಳನ್ನು ಅಧ್ಯಯನ ಮಾಡಿದ್ದಾರೆ. ಇ. ಮ್ಯಾಕ್ ಎಂಬ ಸುಪ್ರಸಿದ್ಧ ಭೌತಶಾಸ್ತ್ರ ವಿಶಾರದ ಮೈಮೇರೆ ಆಗುವುದು ಹೇಗೆ ಎಂಬ ಸಮಸ್ಯೆಯನ್ನು ಎದುರಿಸಿ ಕ್ಷೇತ್ರದಲ್ಲಿ ಒಂದೆಡೆ ಬೆಳಕಿನಲ್ಲೋ ವ್ಯತ್ಯಾಸವಾದರೆ ಮೈಮೇರೆ ಮೂಡುವುದೆಂದೂ ಆದರೆ ಈ ವ್ಯತ್ಯಾಸ ಶೀಘ್ರವಾಗಿ ಆಗಬೇಕೆಂದೂ ಹೇಳಿದ್ದಾನೆ. ಅವನ ಪ್ರಕಾರ ಮೈಮೇರೆ ಒದಗುವುದು ಬದಲಾವಣೆಯ ಬದಲಾವಣೆ. ಫ್ರೈ ಮತ್ತು ಬಾಟ್ರ್ಲಿ ಎಂಬುವರು ಸಂವೇದನೆಯ ನೆಲೆಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಎದುರಿಸಿದ್ದಾರೆ.

	ಈಚಿನ ಸಂಶೋಧನೆಗಳಿಂದ ವ್ಯಕ್ತಿತ್ವಕ್ಕೂ ಪ್ರತ್ಯಕ್ಷಕ್ಕೂ ನಿಕಟಸಂಬಂಧ ಇದೆಯೆಂದು ವ್ಯಕ್ತವಾಗಿದೆ. ಸ್ಟರ್ನ್ ಎಂಬ ವಿದ್ವಾಂಸ ತುಂಬ ಹಿಂದೆ `ವ್ಯವಸ್ಥಾಪಕನಿಲ್ಲದೆ ವ್ಯವಸ್ಥೆ ಇರದು ಎಂಬ ಸೂತ್ರವನ್ನು ನಿರೂಪಿಸಿದ್ದ. ಎಂದರೆ ವ್ಯಕ್ತಿತ್ವದ ವ್ಯವಸ್ಥೆ ಇರದು ಎಂಬ ಸೂತ್ರವನ್ನು ನಿರೂಪಿಸಿದ್ದ. ಎಂದರೆ ವ್ಯಕ್ತಿತ್ವದ ವ್ಯವಸ್ಥೆಯಿಂದಲೇ ಪ್ರತ್ಯಕ್ಷದ ವ್ಯವಸ್ಥೆ ಸಿದ್ಧವಾಗುವುದೆಂದು ಆರ್ಥ. ಆದರೆ ಈಗ ಈ ಸೂತ್ರವನ್ನು ಸ್ವಲ್ಪ ಬದಲಿಸಿ ಪ್ರತ್ಯಕ್ಷದ ವ್ಯವಸ್ಥೆಯಿಂದಲೇ ವ್ಯಕ್ತಿತ್ವದ ವ್ಯವಸ್ಥೆ ಆಗುವುದು ಎನ್ನುತ್ತಾರೆ. ಪ್ರತ್ಯಕ್ಷದಿಂದ ವ್ಯಕ್ತಿತ್ವ ಎನ್ನುವುದು ಈಗಿನ ನಿಲವು. ಕ್ಲೈನ್ ಮತ್ತು ಷ್ಲೆಸಿಂಗರ್, ಬ್ರನ್ಸ್‍ವಿಕ್, ಬ್ಯೂನರ್ ಪೋಸ್ಟ್‍ಮನ್ ಮುಂತಾದವರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ